Friday, 23 May 2014

ವಿಸ್ಮಿತನ ವರಸೆ

ಅಂದು ಉಟ್ಟ ಸೀರೆಯಲ್ಲಿ
ನೆಟ್ಟ ನೇರ ನೋಟದಲ್ಲಿ
ನನ್ನ ಕುಕ್ಕಿ ತಿನ್ನುವಂತೆ
ನೀನು ನೋಡುತಿದ್ದೆ;
ದೂರದಲ್ಲೇ ಇದ್ದರೂನು
ಪಕ್ಕ ಒಂದು ಚಾಪೆ ಹಾಸಿ 
ಹೃದಯದಲ್ಲಿ ತಂತಿ ಮೀಟಿ
ಸದ್ದು ಮಾಡುತಿದ್ದೆ!!

ಕದ್ದು ನೋಡಲೊಂದು ಪುಳಕ
ಮುದ್ದು ಮುಖವ ಕಂಡ ಬಳಿಕ
ಬೆಪ್ಪು ಮನದ ಕಪ್ಪು ಮೋರೆ
ಕೆಂಪು ಮಂಗನಂತೆ;
ಖುದ್ದು ನಾನೇ ಜಾರಿ ಬಿದ್ದು
ನಿನ್ನ ನೆಪವ ಮುಂದೆ ಇಟ್ಟೆ
ನೆನಪ ಮಬ್ಬು ವಸ್ತ್ರದಲ್ಲಿ
ಕಣ್ಣ ಸುತ್ತಿಕೊಂಡೆ!!

ಕೆಟ್ಟ ಕನಸು ಎಲ್ಲಿ ಬಿಟ್ಟೆ?!!
ಎಂಬುದೊಂದೂ ತಿಳಿಯುತಿಲ್ಲ 
ಮತ್ತೆ-ಮತ್ತೆ ನಿನ್ನ ಕಂಡು
ಇನ್ನೂ ಮೂಖನಾದೆ;
ಕಟ್ಟ ಕಡೆಯ, ತುತ್ತ ತುದಿಯ
ಪ್ರಶ್ನೆಯೆಂದು ದನಿಯನೆತ್ತಿ
ಮುಗಿವ ಹೊತ್ತು ಆಗುವಲ್ಲಿ
ಪೂರ್ತಿ ಸತ್ತು ಹೋದೆ!!

ಉತ್ತರಕ್ಕೆ ನೀನು ತಿರುಗಿ
ಉತ್ತರಕ್ಕೆ ಬೆನ್ನ ಕೊಡುವೆ
ತತ್ತರಿಸಿತು ದಿಕ್ಕು ಮರೆತ
ನನ್ನ ಒಂಟಿ ಜೀವ;
ಎತ್ತರಕ್ಕೆ ಏರಿ ನಿಂತೆ 
ಸಪ್ತ ಕಡಲ ಕುಡಿದು ಬಂದೆ
ನಿನ್ನ ಒಂದು ನಗೆಯ ಕಂಡು
ಒಡಲು ಪೂರ ತೇವ!!

ಶಬ್ಧವಾಗಿ, ಮೌನವಾಗಿ
ಸ್ತಬ್ಧವಾಗಿ, ನೀಳವಾಗಿ
ಮುಗಿಲ ಹಾಗೆ ನೀನು ಒಂದು
ಕಣ್ಣ ಮುಂದೆ ಒಗಟು;
ಒಂದು ದೀರ್ಘ ಕವನದಂತೆ
ಅಲ್ಲಿ ಇಲ್ಲಿ ಅರ್ಥವಾದೆ
ಏನೂ ತೋಚದಾಯಿತೀಗ
ನಿನ್ನ ಚೆಲುವ ಹೊರತು!!

                    -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...