Thursday, 8 May 2014

ಮತ್ತೊಂದು ಅಮರ ಕಥನ

ಒಂದೇ ಬಾಣದ ಗುರಿಗೆ ಎದೆ ಕೊಟ್ಟು
ಒಂದೇ ಪ್ರಾಣದ ಎರಡು ಜೀವಗಳು
ಕೊನೆಗೊಂದೇ ಉಸಿರಲ್ಲಿ ಉಳಿದೆಲ್ಲ ಆಸೆಗಳ
ಕಂಬನಿ ಜಾರಿಸಿದಂತೆ ಗಳ-ಗಳನೆ ಸುರಿದುಕೊಳ್ಳುವಾಗ,
ಸೀಳಿ ಹೊರಟ ಬಾಣವು ಒಮ್ಮೆ
ಹಿಂದಿರುಗಿ ನೋಡುವಾಸೆಯಲ್ಲಿ ಗೆಲ್ಲಬಹುದಾದರೆ
ಸೋತ ತನ್ನ ತಾನೇ ಶಪಿಸಿಕೊಂಡು ನಾಚಿ
ಅದಾವುದೋ ಮರದ ಕೊಂಬೆಗೆ
ತಲೆ ಕೊಟ್ಟು ಸಾಯದೇ ನರಳುವುದು;
ಇತ್ತ ಜೋಡಿ ಜೀವಗಳು ತನಗೆ ವಂದಿಸುತ್ತ
ತೋಳಲ್ಲಿ ಕೊನೆ ನೆನಪನ್ನು ಎಣಿಸುತ್ತಿದ್ದವು!!

ಅಲ್ಲಿ ಬೆರೆತ ಎರಡು ಹೃದಯದ ನೆತ್ತರು
ನಿಷ್ಕಲ್ಮಷ ಪ್ರೇಮದಲ್ಲಿ ಎಂದೂ ಒಂದಾಗದ
ಮೈ ಮಾಂಸಕ್ಕೆ ಶಾಂತಿ ಕೋರಿ
ನೈಸರ್ಗಿಕವಾಗಿ ಬಿಡಿಸಲಾಗದಂತೆ ಒಂದಾಗಿತ್ತು!!

ನಿಚ್ಚಲವಾಗಿದ್ದ ಗಿಡ, ಮರ, ಬಳ್ಳಿ, ಹೂಗಳು,
ಇರುವೆ, ಜೇಡ, ಮಂಗ, ಮರಿಗಳೆಲ್ಲ
ಕಣ್ತೇವದಲ್ಲಿ ಬೆನ್ನು ಮಾಡಿ ಬೀಳ್ಗೊಟ್ಟವು
ಕೊನೆಯ ಸರತಿಯ ಸುರತವ ಸ್ವಾಗತಿಸಿ!!

ಹೆಪ್ಪುಗಟ್ಟಿದ ಪ್ರೀತಿ ಕಂದು ಬಣ್ಣಕ್ಕೆ ತಿರುಗಿತ್ತು,
ಮರದೊಳಗೆ ತಲೆ ಮರೆಸಿಕೊಂಡ ಬಾಣದಂಚೂ
ಅಂತೆಯೇ ಕಂಗೊಳಿಸುತ್ತಿರಬೇಕು!!

ಬಾಣವೂ ಅಮರ ಪ್ರೇಮ ಕಥನದಷ್ಟೇ ಜೀವಂತ,
ಖಳನ ಪಾತ್ರದಲ್ಲಿ;
ಮಣ್ಣಾದ ಆ ಜೋಡಿ ಹಕ್ಕಿಗಳ ಪಾಲಿಗದು
ಬೆಸೆದ ಚಮ್ಮಾರನಂತೆ, ಕಥಾ ನಾಯಕನೇ!!

                                        -- ರತ್ನಸುತ

1 comment:

  1. ಖಳ ನಿರ್ಭಾವಿ, ಪಿಕದಳಲು ಕೇಳುವುದೇ ಅವಗೇ?

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...