Tuesday, 6 May 2014

ಆ ಮೊದಲ ನೋಟಕ್ಕೆ

ತಂಗಾಳಿ ಪಿಸು ಮಾತ
ಆಡುವ ಸಮಯ
ನಿನ್ನನ್ನು ನೇವರಿಸಿ ಬಂತೇ ತಾನು?
ಮುಸ್ಸಂಜೆ ವೇಳೆಯಲಿ
ಗುಟ್ಟಿನ ವಿಷಯವ
ಯಾರಲ್ಲಿ ಹೇಳಲು ಬಂದೆ ನೀನು?

ಮುಗಿಲೆಲ್ಲ ಇಣುಕಿಣುಕಿ
ಮಗುವಂತೆ ತೋಚಿವೆ
ತಲೆ ಮೇಲೆ ನೀ ಹೊತ್ತು ತಂದೆಯೇನು?
ಆಕಾಶವೇ ಹಿಗ್ಗಿ
ಕೆಂಪಾಗಿ ಹೋಗಿದೆ
ಕೈಯ್ಯಾರೆ ನೀ ಹಚ್ಚಿ ಬಂದೆಯೇನು?

ಕ್ಷಿತಿಜಕ್ಕೂ ಕೌತುಕವು
ಸಹಿಸಲಾಗದೆ ಹೋಗಿ
ಕೈ ಚಾಚು ದೂರದಲಿ ಸಿಕ್ಕಿತಲ್ಲ!!
ಹಾರಾಟವ ಬೆಳೆಸಿ
ದಣಿವಾರಲು ಬಂದ
ಹಕ್ಕಿ ಈ ಮಾತನ್ನು ಒಪ್ಪುತಿಲ್ಲ!!

ಹೂವಲ್ಲಿಯ ಪೊಗರು
ಹೊತ್ತು ನಿಂತ ಬಳ್ಳಿ
ನಿನ್ನಿಂದ ಪಾಠವನು ಕಲಿಯಬೇಕು;
ದೇವಕನ್ಯೆಯರೆಂದು
ಕರೆಸಿಕೊಳ್ಳುವರೆಲ್ಲ
ಸಾಲಲ್ಲಿ ತುಸು ದೂರ ನಿಲ್ಲ ಬೇಕು!!

ಕವಿಯಾಗುವ ಸಲುವೆ
ಪರಿತಪಿಸುವ ಮನಸು
ನಿನ್ನಿಂದ ಸ್ಪೂರ್ತಿಯನು ತುಂಬಿಕೊಳಲಿ;
ಅಚ್ಚಾಗುವ ಹಾಳೆ
ತುಂಟ ರಸಿಕರ ಕಣ್ಣ
ಅರಳಿಸಿ ಕೆರಳಿಸಲು ಹಾರಿಬಿಡಲಿ!!

ಮುಂಗುರುಳ ಕುಣಿತಕ್ಕೆ
ಹೆಂಗರುಳು ಕಿವುಚುತ್ತ
ಹೊಟ್ಟೆ ಕಿಚ್ಚಿಗೆ ಕಾರಣ ಆಯಿತೇ?
ನಿನ್ನನ್ನು ಹೊಗಳೋಕೆ
ಎಲ್ಲ ಭಾಷೆಯ ಬಿಟ್ಟು
ಅಪ್ಪಟ ಕನ್ನಡವೇ ಬೇಕಾಯಿತೇ!!

                            -- ರತ್ನಸುತ

1 comment:

  1. ’ನಿನ್ನನ್ನು ಹೊಗಳೋಕೆ
    ಎಲ್ಲ ಭಾಷೆಯ ಬಿಟ್ಟು
    ಅಪ್ಪಟ ಕನ್ನಡವೇ ಬೇಕಾಯಿತೇ!!’ ಅದು ಅನಿವಾರ್ಯವೂ ಕೂಡ...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...