Wednesday, 25 June 2014

ಕಣ್ಣಾಚೆ ಹೊರಟವಳೇ

ಒಮ್ಮೆಲೆ ಮಿಂಚಿನ ಪ್ರವಾಹ
ಕೆರಳ ಬಲ್ಲ ಮೋಡಗಳಾವೂ ಇರದಾಗಿತ್ತು,
ಇದ್ದಕ್ಕಿದ್ದಂತೆ ಒಂದು ಗುಡುಗು
ಆಕಾಶ ನಿಖರ ನೀಲಿಯ ತೊಟ್ಟಿತ್ತು,
ಸಣ್ಣ ಸೋನೆಯ ಆರಂಭ
ತಲೆ ಎತ್ತಿ ನೋಡಿದರೆ ಬಿಸಿಲೋ ಬಿಸಿಲು,
ಕೆನ್ನೆ ಒದ್ದೆ-ಮುದ್ದೆಯಾಗಿತ್ತು
ಮಳೆಯಲ್ಲದು, ಕಣ್ಗಡಲ ವಿರಹ ಗೀತೆ!!

ಅಲೆಗಳ ಮೇಲೆ ನಿನ್ನ ನೆನಪ ಪಯಣ,
ಒಮ್ಮೊಮ್ಮೆ ಬಿರುಸಾದರೆ ಕೆಲವೊಮ್ಮೆ ಪ್ರಶಾಂತ;
ಲಂಗರು ಮರೆತು ಬಂದಿರಬೇಕು ನೀನು,
ದಡ ಮುಟ್ಟಿದರೂ ನಿಲ್ಲದ ನೌಕೆ!!

ನೀನು ಒಂಟಿಯಾಗಿ ಬಿಕ್ಕಿದ್ದರ ಪರಿಣಾಮ
ನನ್ನ ಕಣ್ಣು ತೇವಗೊಂಡು ಕೆಂಪೆದ್ದಿತು
ನಿನ್ನ ಕೆನ್ನೆ ರಂಗಿಗೆ ಸೆಡ್ಡು ಹೊಡೆವಂತೆ;
ಕ್ಷಮಿಸು, ರಕ್ಷಣೆ ನೀಡುವಲ್ಲಿ ಸೋತಿದ್ದೇನೆ
ಜಾರು ಕಂಬನಿಗಳಿಗೆ!!

ಚೂರು ಚೂರೇ ಮುಕ್ತವಾಗುತ್ತಿರುವೆ
ಕಸುವಿಲ್ಲದ ರೆಕ್ಕೆ ಬಡಿದ ಹಕ್ಕಿಯಂತೆ;
ಕನಿಷ್ಠ ನೆಮ್ಮದಿ ನೀಡದ ಕಣ್ಗಡಲು
ದಾರಾಳ ಆಕಾಶಕೆ ಬಿಟ್ಟುಗೊಡುತ್ತಿದೆ!!

ನೆನೆನೆನೆದೇ ಮರೆಯುವ ಪ್ರಯಾಸದ
ಬರಿದಾದ ಕಣ್ಗಳಲ್ಲಿ 
ಧೂಳು ಹಾರಿದರೂ ಹೊರ ದಬ್ಬುವಷ್ಟು
ನೀರು ಉಳಿದಿಲ್ಲ, ನೀನೂ ಉಳಿದಿಲ್ಲ!!

                                    -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...