Wednesday, 25 June 2014

ಹುಚ್ಚು ಅಭಿಮಾನ

ಬಂದವಳು ಬಂದಂತೆ
ಹಿಂದಿರುಗಿದೆ ಏನೋ 
ಮರೆತು ಬಂದವಳಂತೆ
ಏಕೆ ಹೀಗೆ?
ದೇವರಿಗೆ ಬೆಳಗಿದ
ಮಂಗಳ ಆರತಿಯು
ಕಣ್ಣಿಗೊತ್ತುವ ಮುನ್ನ
ನಂದ ಹಾಗೆ!!

ಏನನ್ನೋ ಹುಡುಕುತಿವೆ
ಆ ನಿನ್ನ ಕಣ್ಣುಗಳು
ನನ್ನನ್ನೇ ಅನ್ನಲದಕೇಕೆ
ದಿಗಿಲು?
ಈ ಮೊದಲು ಹೀಗೆಲ್ಲ
ಒದ್ದಾಡದವನು ನಾ
ಈ ನಡುವೆ ಹೀಗೇಕೆ
ಎದುರು ಸಿಗಲು!!

ನೆಪವೊಂದೇ ಸಾಕಲ್ಲ
ನೆನಪೆಲ್ಲ ಬೇಕಿಲ್ಲ
ಹೂ ಅಂದರೆ ಸಾಕು
ಹೃದಯ ನಿನದು;
ಬಲಗಾಲು ಒಲ್ಲದೆ
ಎಡಗಾಲೇ ಇಟ್ಟರೂ
ಒಳ ಬರುವಿಗೆ ಮನಸು
ಬೇಡ ಅನದು!!

ನೂರಾರು ಹೆಣ್ಣುಗಳು
ನಿನ್ನಂತೆ ತೋಚುವುದು
ನೀ ಅವರಲುಳಿಸಿದ
ಕಿಚ್ಚಿನಿಂದ;
ಮಿತಿ ಇಲ್ಲದವನಂತೆ 
ಅಲೆಯುತ್ತಲಿದ್ದವ
ಸರಿ ಹೋದೆ ನಿನ್ನೊಲವ
ಹುಚ್ಚಿನಿಂದ!!

ಬಾಗಿಲಲ್ಲ ಸ್ಥಳವು
ನಡುಮನೆಯ ಹಬ್ಬಕ್ಕೆ
ನೀನಾಗಬೇಕಲ್ಲ
ನೀಲಾಂಜನ;
ನಗುವುದ ಕಲಿಸಿಕೊಟ್ಟವರಾರು
ಈ ನಿನಗೆ
ಕಂಡೊಡನೆ ಪ್ರಾಣಕ್ಕೂ
ರೋಮಾಂಚನ!!

ಬಿಗುಮಾನ ಬಿಟ್ಟು ಬಾ
ಬಹುಮಾನ ಈ ಒಲವು
ಹೊತ್ತು ತರದಿರು ಜೊತೆಗೆ
ಅನುಮಾನವ;
ನೀನೇ ಮೆಚ್ಚುವೆ 
ಆಗ ಕಣ್ತುಂಬಿಕೊಳ್ಳುವೆ
ಕಂಡು ಎಲ್ಲೆಯ ಮೀರಿದ-
-ಭಿಮಾನವ!!

                   -- ರತ್ನಸುತ

1 comment:

  1. ಸಲೀಸಾಗಿ ಒಳ ನಡೆದು ಬಂದರೆ ಒಲುಮೆಯ ಕಥೆಗಾದರೂ ಎಲ್ಲಿದೆ ರುಚಿ?
    ತುಸು ಕಾಯಿಸಿ ಮರು ಮರಳಿಸಿ ಬಸಿದರಲ್ಲವೇ ಗಟ್ಟಿ ಹಾಲು ಕೋವಾ...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...