Tuesday, 10 June 2014

ಅಭಿಸಾರಿಕೆ

ಹೇ ಸುಕೋಮಲ ಸುಂದರ ರಮಣಿ
ಅದ್ವಿತೀಯ ಲಾವಣ್ಯ ರಾಣಿ
ಮನೋಹರ ಸಾಗರಿ, ಅಕ್ಷ ಚತುರಿ
ಸುಮಧುರ ಕಂಠ ಸಿರಿ, ಸವಿ ಲಹರಿ!!

ದಟ್ಟ ಕಡಲೊಡಲ ಕುರುಳಿನ ಅಲೆಯೇ
ನೋಟ ಬೇಟೆ ಶರ, ಸಿಕ್ಕಿನ ಬಲೆಯೇ
ಭುಜ ನಿಜ ಜಪಕೆ ಅತಿಶಯ ತಾಣ
ಉಕ್ಕಿದಾಂತರ್ಯ ಬಹು ಗುಣ ವದನ!!

ಮಾದರಿ ಕಲಾಕೃತಿ ಶಿಲೆ, ಶೀಲೆ
ಹೂವ ಬನದ ಸುಗಂಧಿತ ಮಾಲೆ
ಸ್ವಪ್ನ ಸಹಚಾರಿಣಿ, ಗೌಪ್ಯ ಶಾಲೆ
ಕಾವ್ಯ, ಲಯ, ಗಮಕ ಭಾವದ ಬಾಲೆ!!

ಹನಿ ಮುಗಿಲಾಧರ ಮೋಹಕ ಮೌನ
ತೆನೆ ತೊನೆದಾಡುವ ಬಳುಕಿನ ಸಣ್ಣ
ಮೆದು ಪಾದದೊಳದ್ದಿದ ಮಧು ಕುಂಭ
ಇಳಿ ಜಾರಿನ ಸಮ ನವಿರು ನಿತಂಬ!!

ದಶಾಸುರನ ಶಿರ ಬಾಗಿಸುವಂದ
ಪ್ರಕಾಶಮಾನ ಸಮಾನರವಿಂದ
ಕೋಕಿಲ, ಹಂಸ, ನೈದಿಲೆ ಬೆಸೆದ
ಅದ್ಭುತ ಸೊಗಸಿನನನ್ಯಾನಂದ!!

ಮಂಗಳ ಮುಖಿ, ಬೆಳದಿಂಗಳ ಸಖಿ ನೀ
ಗತ, ವಾಸ್ತವ, ಭವಿಷ್ಯದ ಬೆಳಕು
ಶೃಂಗಾರದ ಚಿರಂತನ ಚಿಗುರು
ಅನಂತದೆಡೆ ಸುದೀರ್ಘ ಮೆಲುಕು!!

                               -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...