Tuesday, 10 June 2014

ಪ್ರೇಮ ಪೀಡಿತ

ಒಲವೆಂಬುದೊಂದು ಕಟುವಾದ ಗ್ರಂಥ
ದೂರಿಡುವ ಅಂದುಕೊಂಡೆ;
ಈ ಹೃದಯಕೊಂದು ಹೆಸರಿಟ್ಟೆ ಆಗ
ಆ ಹೆಸರೇ "ಕಲ್ಲು ಬಂಡೆ"!!

ಊರೆಲ್ಲ ನಿನ್ನ ಹೊಗಳುತ್ತ ಇರಲು
ನಾನೊಬ್ಬ ಕಿವುಡನಾದೆ;
ನಿನ್ನಂದ ಚಂದ ಕಾಣೋಕೂ ಮುನ್ನ
ಕಣ್ಣಿದ್ದೂ ಕುರುಡನಾದೆ!!

ನೀ ಎಷ್ಟೋ ಬಾರಿ, ಬರುತಿದ್ದ ದಾರಿ
ನನಗೆದುರು ಸಿಗಲೇ ಇಲ್ಲ;
ವಿಧಿ ಆಟದಂತೆ ನಾವಿದ್ದ ಊರು
ನಮ್ಮನ್ನು ಕೂಡಲಿಲ್ಲ!!

ಜಾತ್ರೆಯಲಿ ನೀನು ಕಳಕೊಂಡೆ ಗೆಜ್ಜೆ
ನಾ ಹುಡುಕಿ ತರಲಿ ಅಂತ;
ಸಿಕ್ಕಂಥ ಅದನು ಕೊಡಲೆಂದು ಬಂದೆ
ನೀ ಕಂಡೆ, ನಿರ್ದಿಗಂತ!!

ಆಕಾಶದಲ್ಲಿ ಎಷ್ಟೆಲ್ಲ ಬಣ್ಣ 
ಮೂಡಿತ್ತು ಸಾಲು ಸಾಲು;
ಬೆರಗಾಗಿ ಹಾಗೇ ಬೇಕಾದ್ದ ಕೇಳು
ಜೀವಕ್ಕೂ ಉಂಟು ಪಾಲು!!

ತಾನಾಗಿ ಎಂದೂ ಕರಗಿಲ್ಲ ಹೃದಯ
ನೀ ನಕ್ಕು ಕೆಡಿಸಿಬಿಟ್ಟೆ;
ಕಣ್ಣಲ್ಲೇ ಉಳಿಯ ಪೆಟ್ಟನ್ನು ಕೊಟ್ಟು
ನಿನ್ಹೆಸರ ಕೆತ್ತಿ ಬಿಟ್ಟೆ!!

ನಾನೀಗ ಪ್ರೇಮಿ ಅನ್ನುವುದೇ ಹೆಮ್ಮೆ
ಹೀಗನಿಸಲಿಲ್ಲ ಎಂದೂ;
ಕನಸಲ್ಲೂ ನೀನೇ, ಮನಸಲ್ಲೂ ನೀನೇ
ನನ್ನಾತ್ಮ ದೈವಬಂಧು!!

                                  -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...