Thursday, 19 June 2014

ಇನ್ನಿಲ್ಲದ ದಿನಚರಿ

"ಸಿಗಲಿ ನಮ್ಮಷ್ಟೇ ಗೆಲುವು
ನಮ್ಮ ನಾಳೆಗಳಿಗೆ
ಇರಲಿ ಇನ್ನಷ್ಟು ಒಲವು
ಕಳೆದ ನೆನ್ನೆಗಳಿಗೆ";

ಇವು ನನ್ನ ಹಿಂದಿನ ದಿನಚರಿಯ
ಕೊನೆ ಪುಟದ, ಕೊನೆ ಸಾಲುಗಳು;
ಮತ್ತೆ-ಮತ್ತೆ ನೆನಪಾಗುತ್ತವೆ
ಚೊಚ್ಚಲ ಹೆರಿಗೆಯ ಕರುವಂತೆ!!

ನನ್ನ ಕೋಣೆಯ ಟೇಬಲ್ ಲೈಟಿನ ಬಲ್ಬಿಗೆ
ನನ್ನ ಗೋಳಾಟ ಚನ್ನಾಗಿ ಗೊತ್ತು;
ಮಿತಿ ಮೀರಿದ ಕಂಬನಿ ಹರಿವಿಗೆ
ತಾನೇ ಎಷ್ಟೋ ಬಾರಿ ಬೆಂದು
ಬರ್ನ್ ಆಗಿದ್ದು ಹಳೆಯ ವಿಷಯ!!

ಇನ್ನು ಕಪಾಟಿನ ಬಾಗಿಲು
ಆಗಾಗ ಕಚ್ಚಿಕೊಂಡು 
ಬಿಡಿಸಲಾಗದಷ್ಟು ಬಿಗಿಯಾಗಿ
ಹಠ ಹೊತ್ತು ನಿಲ್ಲುತ್ತೆ;
ಹಳೆಯ ನೆನಪುಗಳಾವೂ ಮರುಕಳಿಸದಂತೆ
ತನ್ನೊಳಗೆಲ್ಲವನ್ನೂ ಅದುಮಿಟ್ಟುಕೊಂಡು!!

ನೆಲಕ್ಕೆ ಹಾಸಿದ ಸಾದಳ್ಳಿ ಮಾರ್ಬಲ್ಲು
ನನ್ನ ಎರಡಾಗಿ ಬಿಂಬಿಸುತ್ತಿದುದು
ಈಗ ತಾನೊಂದು ಸಾಮಾನ್ಯ ಕಲ್ಲೆಂದು 
ನಿರೂಪಿಸಲು ಹೊರಟಿದೆ,
ಅಂತೆಯೇ ನಿಲುವುಗನ್ನಡಿಯೂ ಸಹ!!

ಕಸದ ಬುಟ್ಟಿಯಲಿ ಕೊಳೆತ ಹಾಳೆ
ಜೋಡಿಸಲಾಗದಂತೆ ಹರಿದ ಗೀಟುಗಳು;
ಕಿಟಕಿಗೆ ಕಾರಿರುಳ ಭಯ,
ಚಂದಿರ ತುಕಾಲಿ,
ಬೆಳದಿಂಗಳು ಅಸಡ್ಡೆ!!

ಕಸುವಿಲ್ಲದ ಮನಸಲ್ಲಿ
ಕಸ ವಿಲೇವಾರಿಯ ಸಮಸ್ಯೆ;
ಮನಸೂ ಈಗ ಮಂಡೂರಿನಂತೆ 
ಮೊಂಡು ಹಿಡಿದ ಕಸಿ ನೆನಪುಗಳ
ಕುಪ್ಪೆ ಕುಪ್ಪೆ ಚೆಲ್ಲಾಟದ ನಡುವೆ
ಬೆಂಡಾಗಿ ಹೋಗಿದೆ!!

ದಿನಚರಿಗಳೇ ಹೀಗೆ;
ದುಃಖವನ್ನು ದ್ವಿಗುಣಗೊಳಿಸಿ,
ಖುಷಿಯ ವೇಳೆ ದುಃಖ ಸವರಿ
ಅಳಿಸುವ ಸಾಮಗ್ರಿ!!

ಬರೆಯದೇ ಬಿಟ್ಟು
ಇಷ್ಟೆಲ್ಲ ರಗಳೆ,
ಇನ್ನು ಬರೆವ ಕಲ್ಪನೆಯೂ
ಭಯಾನಕ;
ಬರೆದ ಎಲ್ಲವನ್ನೂ ಸುಟ್ಟು ಹಾಕಿದೆ
ಒಳಗಿದ್ದ ಎಲ್ಲವನ್ನೂ, ಎಲ್ಲರನ್ನೂ!!

                            -- ರತ್ನಸುತ

1 comment:

  1. ವಿಭಿನ್ನವಾಗಿ ಕವನ ಕಟ್ಟುವ ರೀತಿಯನ್ನು ಕಲಿಸುವಂತಿದೆ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...