Thursday, 19 June 2014

ಮನೆ ಬಾಗ್ಲಿಗ್ ಬಂದೋರ್ನ

ಬುಡುಬುಡಿಕೆ ದಾಸಪ್ಪ
ಬುರುಡೇನ ಬಿಡುತಾವ್ನೆ
ಒಂದಿಷ್ಟು ಹಸಿ ಹಿಟ್ಟು
ಕೊಟ್ಟು ಕಳ್ಸಿ;
ಬಗ್ವಂತನ ಅಂತೇನ್ರಾ
ಸುರುವಚ್ಚಿಕೊಂಡಾಂದ್ರೆ
ಸಿಕ್ಕಿದ್ರಲ್ ಸರಿಯಾಗಿ
ಬಿಟ್ಟು ಕಳ್ಸಿ!!

ಮುಸುಡೀನ ತೊಳಿದಂಗೆ
ಮನೆ ಬಾಗ್ಲ ಹೊಸ್ಲಲ್ಲಿ
ಪೀಪಿನ ಊದೋರ್ಗೆ
ಸದ್ರ ಕೊಡಿ;
"ಒಳ್ಳೆದೇ ಆಯ್ತದೆ
ರೇಷ್ಮೆ ಬಟ್ಟೆ ಇಡ್ರಿ"
ಹಿಂಗಂದ್ರೆ ಮುಟ್ನೊಡ್ಕೊಳೋ 
ಹಂಗ್ಕೊಡಿ!!

ಕಣಿ ಹೇಳುತೀನಂತ
ಹಸ್ತಾನ ಕೇಳ್ಯಾರು
ಚಿನ್ನುದ್ ಬಳೆ ಇದ್ರೆ
ತಗ್ದಿಟ್ಟಿರಿ;
ಬೆಟ್ಟಾದ ಮದ್ದಮ್ಮ
ನಾಲ್ಗೆ ಮೇಲೌಳೇನೋ
ಪರೀಕ್ಸೆ ಮಾಡೋಂಗೆ
ಗುಟ್ಟಾಗಿರಿ!!

ಬಸ್ವಣ್ಣ ಬರುತಾನೆ
ಹಣ್ಣಿದ್ರೆ ಕೊಡಿ ಬಾಯ್ಗೆ
ಜೋಲಿಗೆ ತುಂಬ್ಸೋಕೆ
ಹೋಗ್ಬ್ಯಾಡಿರಿ;
ಎಲ್ಲಾರು ಮಾಡೋದು
ಹೊಟ್ಟೆಗೆ, ಬಟ್ಟೆಗೆ
ಯಾಮಾರ್ದಂಗೆ ದಾನ
ಮಾಡ್ತಾಯಿರಿ!!

ಭಿಕ್ಸೆನ ಬೇಡೋರ್ಗೂ
ಯತ್ವಾಸ ಇರ್ತೈತೆ
ಒಂದೊತ್ತಲೊಂದ್ ತುತ್ತು
ಪಕ್ಕಕ್ಕಿಡಿ;
ಹಸ್ವನ್ನ ದಾಟೋದು
ಕಷ್ಟ ಏನಲ್ದಿದ್ರೂ
ದಾಟ್ಸೋರೇ ದೊಡ್ಡೋರು
ನೆನ್ಪಲ್ಲಿಡಿ!!

                    -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...