Tuesday, 10 June 2014

ಖಾಲಿ ಪುಟ ಬರಹ

ಮುಂಗಾರಿನ ಬಿರುಗಾಳಿ
ಹೊತ್ತೊಯ್ದ ಕೆಲ ಹಾಳೆಗಳು
ಖಾಲಿ ಉಳಿದಿದ್ದವು!!
ಮಸಿ ಬಳಿವ ಮೊದಲೇ
ಯಾರಿಗೋ ಓದುವ ಹಂಬಲ?
ನನ್ನ ಖಾಲಿ ಮನಸನ್ನು;
ಖಾಲಿತನಕ್ಕೆ ಬೇಲಿಯ ಹಂಗಿಲ್ಲ,
ಅದಕ್ಕೇ ಇರಬೇಕು!!

ಇನ್ನೂ ಎಚ್ಚರವಾಗದ ಹಾಸಿಗೆ
ನನ್ನ ನಿದ್ದೆ ಗಡಿಯ ಮುಂದೂಡಿದೆ;
ರಾತ್ರಿ ಕನಸಿನ ನಿಮಿತ್ತ
ಹೆಸರಿಡದ ಒಂದು ಕಾದಂಬರಿ ರಚಿಸಿ
ಮನದ ಕಪಾಟಿನಲ್ಲಿಟ್ಟಿದ್ದೇನೆ;
ತೆರೆದೋದಲು ಸಜ್ಜಾಗುತ್ತಿದ್ದಂತೆ
ಕಿಟಕಿಯ ಸಣ್ಣ ಮೂಸೆಯಿಂದ
ಕಿವಿಯೊಳಗೆ ಪವನ ರಾಗ ಹರಿವು!!

ರಾತ್ರಿ ಹಿಡಿದೇ ತೂಕಡಿಸಿದ್ದ
ಲೇಖನಿ ಇನ್ನೂ ಕೈಯ್ಯಲ್ಲೇ ಇದೆ;
ಎಲ್ಲೋ ಕಂಡ ಕೊನೆ,
ಇನ್ನೆಲ್ಲಿಗೋ ಹೊರಳಿದ ಪುಟದ
ದಿನಚರಿಯ ಚಟ ಬಿಡಿಸಲಿರುವ
ಹಸಿಗನಸುಗಳೂ ಕೆಲವೊಮ್ಮೆ
ಆಯಾ ದಿನದ ವಿಷಯಗಳಾಗುತ್ತವೆ;
ಬರೆಯದೆ ಸಾವಿಲ್ಲ!!

ಅಕ್ಷರಗಳು ನಿರಾಕಾರವಾಗಿ,
ಮುಕ್ತವಾಗಿ ಹಾರಾಡುತಿರೆ
ಬಲೆ ಬೀಸಿ, ಸೆರೆ ಹಿಡಿದು
ಬಾಗಿಸಿ ದುಂಡಾಗಿಸುವಾಗ
ಒಂದೊಂದೇ ಹೊರ ಬೀಳುತ್ತವೆ
ಹಾಳೆಯ ಮೇಲೆ ಅಚ್ಚಾಗಲೆಂದು;
ಒಳಗುಳಿದವಿನ್ನೂ ಉಸಿರಾಡುವಾಗ,
ಹೊರಗೆ ಸಾಲು ಸಾಲು ಶವ ಯಾತ್ರೆ!!

ಬನ್ನಿ, ಎಲ್ಲರೂ ಭಾಗಿಯಾಗಿ
ವಿಮುಕ್ತಿ ಕಲ್ಪಿಸೋಣ,
ಸತ್ತ ಭಾವನೆಗಳ ಆತ್ಮ ಸುಖಿಸಲಿ;
ಇನ್ನು ಮೇಲೆ ಬರೆದವೆಲ್ಲಕ್ಕೂ 
ತ್ರಿಶಂಕು ಸ್ಥಿತಿ
ಒಂದು, ಜೀವಂತ ಹೆಣಗಳು
ಇಲ್ಲ, ಸತ್ತ ಜೀವಗಳು;

ಗಾಳಿ ಹೊತ್ತೊಯ್ದದ್ದು ಸ್ವಾಗತಾರ್ಹ,
ಪಂಚಭೂತಗಳಲ್ಲೊಂದಾದ ತಾನು
ಮುಟ್ಟಿಸ ಬಹುದವನು
ಆಪ್ತ ಮನಸುಗಳ ತೃಪ್ತ ಓದಿಗೆ;
ನನ್ನ ಖಾಲಿತನವ ಇಷ್ಟ ಪಡುವವರು
ಯಾರಾದರೂ ಇದ್ದಾರೆಯೇ?!!

                            -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...