Tuesday, 10 June 2014

ಮರದಡಿಯ ಸೊಲ್ಲು

ಮರದಡಿಯ ಕುರುಹುಗಳು
ನೆನ್ನೆ ಬೀಗಿದ ಎಲೆಯ
ಗತವನ್ನು ಸಾರುವಲಿ ನಿರತವಾಗಿತ್ತು;
ಮೇಲೆಲ್ಲೋ ಹಾರುತ್ತ 
ಮಿಕ ಹುಡುಕುತ ಹದ್ದು
ಬೋಳು ತಲೆ ಮರವನ್ನು ಕೊಂಡಾಡುತಿತ್ತು!!

ಕೊಳೆತಾವ ಹಣ್ಣೆಲೆಗ-
-ಳೆಲ್ಲ ತಳದಲಿ ಸಿಲುಕಿ
ಹೊಸದಾಗಿ ಉದುರಿಕೊಂಡವು ಹಾಸಿಕೊಳಲು;
ಬುಡವಂತೂ ಬಿಕ್ಕದೇ
ಇನ್ನೂ ನಕ್ಕಿತು ಖುಷಿಗೆ
ಸಿಹಿಯ ಗೊಬ್ಬರ ತನ್ನ ಹೊಟ್ಟೆ ತುಂಬಿರಲು!!

ನವಜಾತ ಶಿಶುಗಳು
ಎಳೆ ಹಸಿರ ಉಡುಗೆಯಲಿ
ಉದುರಿದವುಗಳ ಗದ್ದುಗೆಯ ಪಡೆದುಕೊಂಡು;
ಮಣ್ಣೊಳಗೆ ಧ್ಯಾನಿಸುತ
ನೂರೊಂದು ಊಹಿಸುತ
ಬೇರುಳಿಯಿತು ಬುಡ-ಮೇಲಾಗದಿರಲೆಂದು!!

ದಾಟಿ ಹೊರಟ ಕಿರಣ
ಜಾಡೊಂದ ಬಿಟ್ಟಿಹುದು
ಹಿಂಬಾಲಿಸಿ ಬಂದ ಕಿರಣಕಳ ದಾರಿಗೆ;
ಭೂಮಿಯೂ ತನಗೇನೂ
ಕ್ಷಾಮವಿಲ್ಲದ ಹಾಗೆ
ನಗುವನ್ನೇ ಉಟ್ಟಿತ್ತು ಆ ಮೊದಲ ಬೇಟಿಗೆ!!

ಮೋಡಗಳು ತೇಲುತಲಿ
ಅಲ್ಲಲ್ಲಿ ವಾಲುತಲಿ
ಶಿಖರ ಹಣೆ ನೇವರಿಸಿ ಹೊರಟಂತೆ ಭಾಸ;
ಸುಳುವನ್ನೇ ನೀಡದೆ
ಅರಳಿ ನಿಂತ ಹೂವು 
ಎಂದಿನಂತೆ ಬೀರುತಿದೆ ಮಂದಹಾಸ!!

ಸಕ್ಕರೆಯ ಪಾಕಕ್ಕೆ
ಏಲಕ್ಕಿ ಚಿಟಿಕೆಯನು
ಹದವಾಗಿ ಬೆರೆಸೋದೇ ಕಬ್ಬಿಗನ ಕಾಯ;
ಸವಿಯನ್ನೇ ಉಣಬಡಿಸಿ
ಮೈ ತಣಿಸುವ ಹಸಿರು
ಸಹ್ಯವಲ್ಲ ತೋರಿದರೆ ಆದ ಗಾಯ!!

                                 -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...