Tuesday, 10 June 2014

ಬೀಡಿ-ಬೆಂಕಿಪಟ್ಣ!!

ಕಡ್ಡಿ ಗೀರಿದಾಗ 
ಅದೇನು ಉತ್ಸುಕತೆ!!
ಬರ್ರನೆ ಉರಿದು
ಇನ್ನೇನು ಬೆರಳನ್ನೇ ನುಂಗುವಂತೆ
ಧಾವಿಸಿದ ಬೆಂಕಿ
ತಲೆಯಿಂದ ಕೆಳಗಿಳಿದಂತೆ
ಸ್ತಬ್ಧವಾಗಿ ಚೂರು ಚೂರೇ
ವ್ಯಾಪಿಸಿಕೊಳ್ಳುತ್ತಿತ್ತು!!

ಅತ್ತ ಸುಟ್ಟ ಭಾಗ
ಕೆಂಡವಾಗಿ, ಧೂಪವಾಗಿ
ಬಾಗಿ, ಮುರಿದು ಬಿದ್ದರೆ
ಮತ್ತೊಂದು ಭಾಗಕೆ
ನಿರೀಕ್ಷೆಯ ಕಾವು!!

ತುಟಿ ನಡುವೆ ಸಿಲುಕಿಸಿ
ಅತ್ತಲಿಂದಿತ್ತಲಿಗೆ ಅಟ್ಟುತ್ತ,
ಕಡೆಗೆ ನಟ್ಟ ನಡುವೆ ಹಿಡಿದಿಟ್ಟು
ಅಂಟಿಸಿದಾಗ 
ಬೀಡಿಯ ಬುಡದ ತೇವ
ಚಿಲುಮೆಯ ಬಿಸಿಗೆ 
ಸರ್ರನೆ ಸದ್ದು ಮಾಡಿ 
ಹೊಗೆಯ ಸಾಗಿಬಿಡುವಾಗ
ಎದೆಗೊಂದು ಬೆಚ್ಚನೆ ಭಾವ!!

ಕೊಳವೆಯ ಉರಿ
ಖಾತ್ರಿಗೊಂಡಾದಮೇಲೆ
ಉಳಿದಷ್ಟೂ ಕಡ್ಡಿಯ ಪಾಲಿಗೆ
ಜೀವನ್ಮರಣ;
ಸುಟ್ಟದ್ದು ಮಾತ್ರವೇ
ಪಂಚಭೂತಗಳಲ್ಲಿ ಲೀನ!!

ಹೊಗೆ ಸೊಪ್ಪಿಗೆ ಬಿಗಿ-
ರಕ್ಷೆ ನೀಡಿದ
ಸೂತ್ರದವರೆಗೂ ಸ್ವರ್ಗ,
ಅದರಾಚೆ ಖಾಲಿತನದ
ಕಾಲು ದಾರಿ;

ಅಂಚಿಗೆ ಕಿಚ್ಚಿಟ್ಟು,
ಆರದಂತೆ ಮುಚ್ಚಿಟ್ಟು ಸೇದಿದರೆ
ನೂರು ನಾಕಗಳ
ದಿಕ್ಕು ದಿಕ್ಕಿನ ನಾಮ ಫಲಕಗಳು
ಏಕ ಕಾಲಕ್ಕೆ 
ಸಾಮೂಹಿಕ ಅನಾವರಣ!!

ಅಜ್ಜ ಹೇಳುತ್ತಿದ್ದ
"ಸ್ವರ್ಗಕ್ಕೆ ಕಿಚ್ಚಿಡು" ಎಂದು;
ಇಟ್ಟೆ,
ಸ್ವರ್ಗವೇ ನನ್ನದಾಯಿತು;
ಕಿಸೆಯಲ್ಲೇ ಖಾಯಮ್ಮಾಯಿತು
ಬೀಡಿ-ಬೆಂಕಿಪಟ್ಣ!!

                           -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...