Thursday, 19 June 2014

ನಮ್ಮೂರಿನ್ ಡಾಕ್ಟ್ರು

ಅವರು ಎದೆಯ ಮುಟ್ಟುತಾರೆ 
ಛೀ... ಕುಂಡಿ ಸವರುತಾರೆ
ಥೂ... ಹೊಟ್ಟೆ ಹಿಸುಕುತಾರೆ
ಚೂರೂ ಸಿಗ್ಗೇಯಿಲ್ಲ;
ಗುಪ್ತವಾಗಿ ಮಾತ ನಡೆಸಿ 
ಗುಟ್ಟನೆಲ್ಲ ಅರಿಯುತಾರೆ
ಥೂ... ಬಟ್ಟೆ ಕಳಚುವಾಗಲೂ
ತಡೆಯಂಗಿಲ್ಲ!!

ಕಣ್ಣಿನೊಳಗೆ ಇಟ್ಟು ಕಣ್ಣ
ಅಗಲಿಸುತ್ತ ಗುಡ್ಡೆಯನ್ನ
ಬೆಳಕನಿಟ್ಟು ಕಾಣುತಾರೆ
ಅರ್ಥವಾಗೋದಿಲ್ಲ್ಲ;
ಹಣೆಯ ಮೆಲ್ಲ ಒತ್ತುತಾರೆ
ಗಲ್ಲ ಹಿಡಿದು ತಿರುವುತಾರೆ
ಬಾಯಿ ತೆರೆಸಿ ಎಣಿಸುತಾರೆ
ಮಾತು ಆಡಂಗಿಲ್ಲ!!

ಕೈಯ್ಯಿ ನೇರ ಇಟ್ಟು ಕಂಡು
ಮತ್ತೆ ಮಡಿಸಿ ಮನನಗೊಂಡು
ಕಾಲ ಮಂಡಿ ಚಿಪ್ಪ ತಟ್ಟಲು
ಚೀರಂಗಿಲ್ಲ;
ನಗಿಸುತಾರೆ ಜೋಕು ಹೊಡೆದು
ತಿಳಿಸುತಾರೆ ಎಲ್ಲ ತಿಳಿದು
ಏನೂ ತಿಳಿಯದಿದ್ದರೂ 
ಪ್ರಶ್ನೆ ಮಾಡಂಗಿಲ್ಲ!!

ಚಾಕು, ಚೂರಿ, ಕತ್ರಿ, ಬ್ಲೇಡು
ನಿತ್ಯ ರಕ್ತ ಹರಿಸಿಕೊಂಡು
ಮತ್ತೆ ಅವರೇ ಒರೆಸುವಾಗ
ಶಂಕೆ ಮೂಡೋದಿಲ್ಲ;
ಎಲ್ಲ ಮುಗಿದ ಬಳಿಕ ಅಲ್ಲಿ
ನಮ್ಮ ಬಂಧ ಮುಗಿದ ಹಾಗೆ
ಮತ್ತೆ ಎದುರು ಸಿಕ್ಕರೂ ಗುರುತು
ಹಚ್ಚೋದಿಲ್ಲ!!

ಕೇಳುತಾರೆ ಎದೆಯ ಬಡಿತ
ಹಿಡಿಯುತಾರೆ ನಾಡಿ ಮಿಡಿತ
ಆಳ ಹೊಕ್ಕು ಹೃದಯವನ್ನೂ
ಓದಿ ಬರ್ತಾರಲ್ಲ?!!
ಹಿಂಗಿಂಗೆ ಅಂತ ನೋವ
ಹೇಳಿಕೊಳ್ಳುವಷ್ಟರಲ್ಲೇ
ಹಂಗಂಗೇ ಒಂದು ಗುಳಿಗೆ ಗೀಚಿ
ಕೊಡ್ತಾರಲ್ಲ!!

ನೆಂಟರಲ್ಲ, ಇಷ್ಟರಲ್ಲ
ದೂರ ಅಲ್ಲ, ಹತ್ರ ಅಲ್ಲ
ದುಡ್ಡಿಗಾಸೆ ಪಟ್ರೂ ತೀರ ಏನೂ 
ಮೋಸ ಅಲ್ಲ;
ದೇವರತ್ರ ಹೊತ್ತ ಹರಕೆ
ತೀರಿಸೋದು ನಮ್ಮ ಹಕ್ಕು
ಇಲ್ದೆ ಹೋದ್ರೆ ಮುಂದೆ ಯಾವ್ದುಕ್ಕೂ
ಕ್ಯಾರೇನ್ನಲ್ಲ!!

                                 -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...