Monday, 30 June 2014

ಒಂದಿರುಳು ನಿನ್ನೊಡನೆ

ಕೈ ಕಟ್ಟಿ
ಮೈ ಮುಟ್ಟಗೊಡದೆ
ಕಣ್ಣಲ್ಲೇ ಕಾಮಿಸಿ
ಉತ್ತುಂಗದಮಲಲ್ಲಿ
ತೇಲಿಸುವ ನಿನ್ನ
ಪದಗಳಲಿ ಬಣ್ಣಿಪುದು
ಸುಲಭವೇನಲ್ಲ;
ಆದರೂ ಬಣ್ಣಿಸದೆ
ಉಳಿಗಾಲವಿಲ್ಲ!!

ಮಧುರಾತಿ ಮಧುರ
ಅಧರಾಮೃತದಿ ಪಸರಿಸುವೆ 
ಪದ ಪುಂಜವ
ಎದೆಯ ಮೇಲೆ ಪೂರ;
ಕಣ್ಮುಚ್ಚಿ ಬೆರಳಾಡಿಸುವೆ
ಮಾತ್ರವಷ್ಟೇ
ಹೊರತು ಪಡಿಸಿ
ಬೇರೆ ಯಾವ ತಿರುಳಿಲ್ಲ!!

ಕೋಮಲ ಕಾಂತಿ 
ಕಮಲೋತ್ಪತ್ತ ಕಮಲಿ
ರಮ್ಯ ಕೋಲಾಹಲದ
ಅಕ್ಷ ಹಾಲಾಹಲ;
ಗೊಲ್ಲ ಮುರಳಿ ಕೊಳಲ
ಉಸಿರ ಜೀವನ್ಮುಖಿ
ನಾದ ಹರಿವುದು 
ನಾನು ನುಡಿಸಬೇಕಿಲ್ಲ!!

ಇಹವೆಲ್ಲ ಪರವಾಗಿ
ನನ್ನೊಲವ ಪರವಾಗಿ
ನಾ ಪಡೆದ ವರದಂತೆ 
ನಿಜ ಸಂತಸ;
ಮುಂಬಾಗಿಲಲಿ ಚುಕ್ಕಿ
ಹೆಣೆದ ರೀಖೆಯ ಸೀಮೆ
ಬಣ್ಣ ಬಂಧನದಲ್ಲಿ
ಮೋಸವಿಲ್ಲ!!

ಕಾರಿರುಳ ಕತ್ತಲಲಿ
ಬೆಳಕಿನ ಹಬ್ಬ
ಕಪ್ಪು ಕಾಡಿಗೆ ಕೂಡ
ನವಿಲ ನಿಲುವು;
ತಿಳಿ ಗಾಳಿ ಬೀಸಿರಲು
ಪ್ರಣತಿ ಬಳುಕುವ ಹೊತ್ತು
ನಂದ ಬೆಳಕಿಗೆ ಯಾವ
ನಷ್ಟವಿಲ್ಲ!!

                 -- ರತ್ನಸುತ

1 comment:

  1. ಪ್ರಣತಿ ಬಳುಕುವ ಹೊತ್ತು ರಮಿಸುವ ಕವಿಭಾವ ರಸಮಯವಾಗಿಯೇ ಮೂಡಿಬಂದಿದೆ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...