Friday 14 August 2020

ದೇವರ ಹೆಸರಲ್ಲಿ ದೀಪ ಹಚ್ಚಿ

ದೇವರ ಹೆಸರಲ್ಲಿ ದೀಪ ಹಚ್ಚಿ

ಅದೇ ಉರಿಯಿಂದ ಪಂಜು ಹೊತ್ತಿಸಿ 
ಪಲ್ಲಕ್ಕಿ ಕಟ್ಟಿ ಊರೂರು ಸಾಗಿ ಬಂದು 
ಸಾವರಿಸಿಕೊಳ್ಳುತಿದೆ ದಾರಿ  

ಮೆಟ್ಟಿಲ ಬುಡದಲ್ಲಿ ಮೆಟ್ಟುಗಳ ಬಿಟ್ಟ
ಪಲ್ಲಕ್ಕಿ ಹೊತ್ತವರ ಗಮನವೆಲ್ಲ 
ನೆರೆದವರು ಮೆಟ್ಟಿದ ಹೋಲುವ ಮೆಟ್ಟು 
ತನ್ನದೇನೋ ಎಂಬ ಚಿಂತೆಯಲ್ಲಿ 

ಮೈ ಮುರಿವುದಕ್ಕೆ ಬಿಡುವೆಲ್ಲಿ 
ದೇವರ ಕೋಣೆಯಲೂ ವಿವಿಕ್ತತೆಯಿಲ್ಲ 
ಧೂಪಕ್ಕೆ ಸೀನಿದರೆ ಮುಡಿ ಹೂ ಜಾರಿ 
ಎಡಕ್ಕೆ ಕೆಡುಕು, ಬಲಕ್ಕೆ ಒಳಿತು 

ಅಭಿಷೇಕದ ಬಂಕೆ ಮೇಲೆ ವಸ್ತ್ರಾಭರಣ 
ವಜ್ರ ವೈಡೂರ್ಯಭರಿತ ಕಿರೀಟ  
ಸೋತ ಕೈಯ್ಯಲಿ ಮಾಯಾ ಅಸ್ತ್ರ 
ಜಗದ ಹರಕೆಗೆ ಬಿರಿದ ಹಸ್ತ 

ಹಸಿದು ಎದುರಿಟ್ಟ ಫಲ ಸೇವಿರದೆ 
ಎದುರಾದವರ ಕಂಬನಿ ಕಥೆ ಕೇಳುವ 
ಉತ್ಸವದ ಮೂರ್ತಿ ಈಗಷ್ಟೇ ಬಂದಿಳಿದನು 
ಗೋಡೆಯ ಆಚೆಗಿನ ವರದಿ ಒಪ್ಪಿಸುವ 

ತೂಗು ದೀಪದ ಮೇಲೆ ತೂಗುವ ಜೇನ್ನೊಣ 
ಹಾಡುವುದು ಮೆಚ್ಚಿಸಲು ದೇವರನ್ನು 
ನಿದ್ದೆಯಿಂದೆಚ್ಚರಿಸೆ ಕಟ್ಟಿದರೋ ಏನೋ 
ಎಲ್ಲರಿಗೂ ಎಟಕುವ ಘಂಟೆಯನ್ನು 

ಆಭರಣ ಪೆಟ್ಟಿಗೆ, ದ್ವಾರಕಿಟ್ಟರು ಬೀಗ
ಗರ್ಭಗುಡಿಯಲ್ಲೀಗ ನಿರ್ಲಿಪ್ತ ಮೌನ
ಹುಂಡಿ ಕಾಣಿಕೆ ಲೆಕ್ಕ ಕೇಳುವವನವನಲ್ಲ 
ಶಾಂತ ಚಿತ್ತಕೆ ಸಿಗದ ದೇವರಿಲ್ಲ... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...