Friday, 21 August 2020

ಎಷ್ಟು ಕಾತರವೇ ಮಳೆಯೇ

ಎಷ್ಟು ಕಾತರವೇ ಮಳೆಯೇ ನಿನಗೆ

ಇಳೆಯ ಮೈಯ್ಯ ಹಸಿಯಾಗಿಸಲು 
ಇಷ್ಟು ಸುರಿದು ಸಾಕಾಗದೆ ಉಳಿದೆ
ದಳಗಳ ಪುಟ್ಟ ಬೊಗಸೆಯಲೂ 

ಕಲ್ಲು ಕಲ್ಲಿನ ಮೂಗಿನಂಚಲಿ  
ಅಂಟಿ ಕೂತೆ ಜಪ ಮಾಡುತಲಿ 
ತುಂಟ ಬೆರಳಿನ ಮೀಟುವಾಟಕೆ 
ಸೋತು ಹಾಗೆ ತಲೆ ಬಾಗುತಲಿ 

ಒಂದುಗೂಡುತ ಹನಿಗಳೆಲ್ಲವೂ 
ಹರಿವ ಸಂಭ್ರಮ ಏಕತೆಗೆ 
ಹಸಿರ ಶಾಲನು ಹೊದ್ದುಕೊಂಡು
ಹ್ಞೂ ಎಂದಿದೆ ಧರೆ ಈ ಕತೆಗೆ 

ಆಚೆ ಗಾಜಿನ ಧೂಳು ಹೇಳ-
-ಹೆಸರಿಲ್ಲದಂತೆ ಮರೆಯಾಗುತಿದೆ 
ಮುನ್ನೋಟಕೂ ಮುನ್ನ ಮಂಜಿನ 
ಪರದೆ ಸರಿಸಿಬಿಡು ಎನ್ನುತಿದೆ 

ಪುಟ್ಟ ಪುಟ್ಟ ಗುಳ್ಳೆಗಳ ಮಾಡಿ 
ಥಟ್ಟೆಂದು ಒಡೆದು ನಶ್ವರ ಗುರುತು 
ಪ್ರಣಯ ಪಕ್ಷಿಗಳ ಮಧುರ ಕ್ಷಣಗಳು 
ದಾಖಲಿಸುತಿವೆ ಈ ಕುರಿತು 

ಮುಂಜಾನೆಯ ಸಂಜೆಗೊರಗಿಸಿ  
ಮುಸ್ಸಂಜೆಯ ಮುಂಜಾವಿಗೆ 
ಬೆರೆಸಿಕೊಟ್ಟ ಮಳೆಗೊಂದು ಪತ್ರ 
ನೀರಲ್ಲಿ ದೋಣಿಯ ದೀವಟಿಗೆ 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...