Wednesday, 19 August 2020

ಅಳುವೊಂದು ಮೊದಲಾದ ಕೆಲವೇ ಕ್ಷಣಗಳಲಿ

ಅಳುವೊಂದು ಮೊದಲಾದ ಕೆಲವೇ ಕ್ಷಣಗಳಲಿ 

ನಲಿವೆಂಬ ಅಧ್ಯಾಯ ತೆರೆದುಕೊಳ್ಳುವ ಸಮಯ 
ನಾಲ್ಕು ಹೆಜ್ಜೆ ಮುಂದೆ ಇಟ್ಟು ಸಾಗಿ ಹೊರಟು  
ಹಿಂದೇಟು ಹಾಕುತಿದೆ ಮೂಕ ಕಣ್ಣೀರು 
ಭರದಲ್ಲಿ ಬಳಸದಿರು ಇರಿಸು ಅಂತರವನ್ನು 
ಸರಸಕ್ಕೆ ತಾಲೀಮು ನಡೆಸಬೇಕಿದೆ ಇನ್ನೂ 
ಕಾದು ಕೂತರೆ ಜನುಮ ಸಾಕಾಗದು ಬದುಕೇ 
ಗಟ್ಟಿಗೊಳ್ಳಲಿ ಆಳ ತಲುಪುವ ಬೇರು 

ಬರಹಗಳು ಕೈ ಮೀರಿ ಬಿಡಿಸಿಕೊಳ್ಳುತಲಿರಲು  
ಸಂಕೋಲೆಯ ಬಳಸಿ ಕಟ್ಟಿಬಿಡಲಾಗದು  
ತಳೆದ ಸಂತೆಗಳಲ್ಲಿ ಉಳಿದ ಸರಕುಗಳನ್ನು 
ಮಾರುವ ತನಕ ಮರಳುವಂತಿಲ್ಲ 
ದುರುಳ ಸ್ವಪ್ನದ ಹಾದಿ ಎಷ್ಟು ಸರಾಗ 
ಮೊದಲಾದ ಪಯಣಕಿದೋ ಎಲ್ಲವೂ ಸೊಗಸೇ 
ಹಿಂದಿರುಗಿದಾಗ ಪೋಷಾಕು ಬಯಲಾಗುವುದು  
ಮೆಚ್ಚುವಷ್ಟೇ ಸುಲಭ ಹೆದರುವಂತಿಲ್ಲ 

ಮೋಡಗಳ ಆಕಾರ ನಂಬುಗೆಗೆ ಅರ್ಹವೇ?
ಕೂಡಿ, ಚೆದುರಿ ಮತ್ತೆ ಹೊಸ ರೂಪ ಪಡೆದವು 
ನೀಲಿ ಗಗನದ ಬೆತ್ತಲಿಗೆ ಕಪ್ಪು ಮಸಿ ಹಚ್ಚಿ 
ಗುಡುಗುಡುಗಿ ಹೆದರಿಸಿತು ಬಳ್ಳಿ ಹೂವ 
ನೆನ್ನೆಯ ಕಾಲು ದಾರಿ ಇಂದು ಮುಳುಗಿದೆ 
ನದಿ ತನ್ನ ಹೊಸ ದಿಕ್ಕು ಕಂಡುಕೊಂಡಂತಿದೆ 
ಕಟ್ಟಿದ ಸೇತುವೆಯು ಪಕ್ಕಕ್ಕೆ ಸರಿದಿರಲು 
ದಾಟಿ ಪಾರಾಗುವುದು ಹೇಗೆ ಜೀವ?

ಬಚ್ಚಿಟ್ಟ ಗುಟ್ಟುಗಳು ಕಾವು ಪಡೆಯುತ್ತಲಿವೆ 
ಎಂದಾದರೊಂದು ದಿನ ಸಿಪ್ಪೆ ಸೀಳಲೇಬೇಕು 
ಹರಿತವಾದ ಸತ್ಯ ಅವರವರ ಅರಿವಿಗೆ 
ಮೆಚ್ಚಿಸುವ ಸುಳ್ಳು ಶುದ್ಧ ಕೊಚ್ಚೆ  
ಸಾಗರದ ದಂಡೆಯಲಿ ಕೂತು ಲೇಖನಿ ಹೊತ್ತು 
ಗೀರುವ ಸಂಜೆಯಲಿ ಮೂಡುವ ಪ್ರಶ್ನೆಗಳ
ಅಲೆಗಳಿಗೆ ಹೊರೆಸುತ ಮರಳಿ ಸಾಗರದೆಡೆಗೆ 
ತೇಲಿಸುವೆ ಸಪ್ತ ಸಾಗರಗಳಾಚೆ  

ಹೇಳಿಕೊಡಬೇಕಿಲ್ಲ ಹಸುಳೆಗೆ ಅಳುವನ್ನು 
ನಗಿಸುವ ಕಲೆಯು ಮೈಗೂಡಬೇಕು 
ಆದರೆ ತಪ್ಪು ಹೆಜ್ಜೆಗಳ ಜೊತೆ ಹಾಕುತ್ತ 
ಮತ್ತೊಮ್ಮೆ ನಡಿಗೆಯ ಕಲಿಯ ಬೇಕು 
ತಮದ ತಲ್ಲಣಗಳಿಗೆ ಬೆಳಕು ಪರಿಹಾರ 
ಸುಮದ ಘಮ ಎಲ್ಲರಿಗೂ ಸಮ ಪಾಲು ಸೂಸೆ 
ನೆರಳಲ್ಲಿ ನೆಲೆಕಾಣಬಯಸುವ ನೆರಳಿಗೂ 
ನರಳಾಟದ ಖುಷಿಯ ಅನುಭವವಿರಬೇಕು 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...