ಮಣ್ಣು, ಹೆಣ್ಣು ಒಂದೇ ಅನ್ನೋ ಮಾತು ಎಂಥ ಚಂದವು
ಪ್ರೀತಿ ಹಂಚೋ ರೀತಿಯಲ್ಲಿ ತಾಳೆ ಆಗೋ ಅರ್ಥವು
ಭೂಮಿ ತಾಳೋ ಸಹನೆ ಇವಳ ಕಣ್ಣಲಿ
ಸವಿ ನೀಡೋ ಕರುಣೆ ಇವಳ ಮಾತಲಿ
ಚಂದಿರನ ಮೊಗದೊಳಗೆ ತಂಗಿದ ತಣ್ಣನೆಯ
ತಿಂಗಳನು ಚೆಲ್ಲಿಕೊಂಡಳು ತುಂಬಿದ ಮೊಗದಲಿ
ಹಿತ್ತಲಿನ ಹೂವ ಬಳ್ಳಿಗೆ ತನ್ನೆಲ್ಲ ಅಂದ ಕೊಟ್ಟು
ಬಿಟ್ಟ ಹೂವು ಗಂಧ ಚೆಲ್ಲಿದೆ ಚಿಟ್ಟೆಯ ಗುಂಗಿನಲ್ಲಿ
ಕನ್ನಡದ ಸೊಗಡು ಉಸಿರ ಒಳಗೂ
ಸಂಗಡವ ಕೊಡುತ ಸುರಿವ ಮಳೆಗೂ
ಆಸೆಗಳ ಸಾಲಿನಲ್ಲಿ ಮೀಸಲಿಟ್ಟ ಜಾಗವನ್ನು
ಪ್ರೀತಿಯಿಂದ ತುಂಬುವಳು ಕಾತರಿಸಿ ನನ್ನ ಹುಡುಗಿ
ಚಿಪ್ಪಿನಲ್ಲಿ ಮುಚ್ಚಿಯಿಟ್ಟರೂ ಮುತ್ತೊಂದು ದಕ್ಕಿದಂತೆ
ಅಚ್ಚು ಮೆಚ್ಚು ತಾರೆಯೆಲ್ಲವ ಕುತ್ತಿಗೆಗೊಪ್ಪುವಂತೆ
ಬುತ್ತಿಯಲ್ಲಿ ಹರಳುಗಳ ಮಿಂಚನ್ನು ಹೊತ್ತು ತಂದೆ
ಸುತ್ತಿ ಬಂದು ಎಲ್ಲ ಸ್ವರ್ಗವ ನಿನ್ನಲ್ಲೇ ಕಂಡುಕೊಂಡೆ
ಹೆಜ್ಜೆ ಮೇಲೆ ಹೆಜ್ಜೆಯ ಇರಿಸಿ ನಡೆದು
ನನ್ನೆದೆಯ ಕದವ ಬಿಡದೆ ಬಡಿದು
ಅಂತರಂಗ ತುಂಬಿಕೊಂಡ ಭಾವದಲ್ಲಿ ತೇಲುವಂತೆ
ಪ್ರೇಮವನ್ನು ಸಾರುವಂತೆ ಮೂಡಿ ಬಂದ ಸಾಲುಗಳಿವು
ಎಚ್ಚರವ ತಪ್ಪಿಸುತಲೇ ಎಚ್ಚರವಾಗಿಸುತ
ಉತ್ತರವೇ ಇಲ್ಲವಾಗಿಯೂ ಎಲ್ಲ ಉತ್ತರಿಸುತ
ಗಿಟ್ಟುವಂತೆ ತಪ್ಪಿ ಹೋಗುಯೂ ಮತ್ತೊಮ್ಮೆ ಸಿಕ್ಕುವಂತೆ
ನಕ್ಕು ಇದ್ದ ಗುಂಡಿಗೆಯನು ಮೆಲ್ಲಗೆ ದೋಚುವಂತೆ
ಕವಿತೆಯ ಒಳಗೂ ಕುಳಿತ ಅವಳು
ಪದಗಳ ಸೃಜಿಸಿ ಕವಿಯಾಗಿಸಲು
ಪ್ರಾಸಗಳ ದಾಸನಾಗಿ ಗೀಚಿಕೊಂಡ ಪದ್ಯಗಳ
ಸಂಚಿಕೆಗೆ ಮುನ್ನುಡಿಯ ಕೊಟ್ಟು ಹೋದ ನಲ್ಲೆ ಇವಳೇ....
No comments:
Post a Comment