ಪ್ರೀತಿ ಹಲವು ಪರದೆಗಳ ಹಿಂದೆ ಅವಿತಾಗ
ನಾನು ಒಂದೇ ಪರದೆಯೆಂಬಂತೆ ಕೂತಿದ್ದೆ
ಒಂದೊಂದೇ ಮೆಲ್ಲ ಸರಿವಾಗ ಎದೆಯಲ್ಲಿ
ಚಿಮ್ಮಲು ಸಜ್ಜಾಗಿತ್ತು ಖುಷಿಯ ಚಿಲುಮೆ
ಮೂಡಿ ಬಂತು ತುಟಿ ಅಂಚಿನಲಿ ನಗೆ
ಮತ್ತೆ ಮುಳುಗುತ ತನ್ನೊಳಗೇ
ಪರದೆಗಳು ಸರಿಯುತ್ತಲೇ ಇರಲು ಅಲ್ಲಿ
ನಗು ಮೂಡಲು ಏಕೋ ಸಂಕೋಚದ ಸಜೆ
ಒಂದಂತೂ ಖಚಿತ, ಒಲವಿದೆ ಎಂದು
ಅದರ ನೆರಳು ಅಷ್ಟು ಪಕ್ವವಾಗಿತ್ತು
ಅಷ್ಟೂ ಪರದೆಗಳ ಮೇಲೆ ಅಚ್ಚೋತ್ತಿ
ನನ್ನ ಕಣ್ಣಗೂ ಅದು ಗೋಚರಿಸುತಿತ್ತು
ಖಾಲಿ ರಂಗಮಂದಿರದಲ್ಲಿ ನಾನೊಬ್ಬನೇ,
ಮೂಕ ಪ್ರೇಕ್ಷಕನಲ್ಲಿ ನೂರು ಭಾವ
ಅವ್ಯಕ್ತ ರಸಗಳ ನನ್ನೊಳಗೇ ಹಿಡಿದಿಟ್ಟು
ಮುಂಬರುವ ಅಚ್ಚರಿಗೆ ಕಾಯುತಿದ್ದೆ
ಪರದೆ ತೆಳುವಾಗುತ್ತಾ ಹೋದಂತೆ
ಪ್ರೀತಿಯ ಆಕಾರ ತಿಳಿಯಾದಂತಿತ್ತು
ಇನ್ನೆಷ್ಟು ಕಾಯಬೇಕೆಂಬ ಕಿಚ್ಚಿನ ಕಾವು
ನನ್ನನ್ನೇ ಆವರಿಸಿ ಬಿಟ್ಟಿತ್ತು
ಸಿಕ್ಕೇ ಬಿಟ್ಟಿತೆಂಬ ಆತ್ಮ ಹಿಗ್ಗು
ದಕ್ಕಿಸಿಕೊಂಡೆನೆಂಬ ಅಹಂಕಾರ
ಎರಡೂ ಸತ್ತು ಮೌನ ಆಚರಿಸುವಾಗ
ಅರಳಿತು ನವಿರಾದ ಪ್ರೇಮ ಪುಷ್ಪ
ರಂಗದಲಿ ನನಗೂ ಪ್ರೇಮಿಯ ಪಟ್ಟ
ಪ್ರೀತಿ ತಾನೊಂದೇ ಸರ್ವ ಹೃದಯದಲೂ
ಕಾಯಿಸಿ ಆಕಾರ ಕೊಡುವುದು ಪ್ರೀತಿ
ಕಾದು ತಾನೂ ಪಡೆದು ಆಕಾರವ!
No comments:
Post a Comment