Friday 14 August 2020

ಮಾತು ಕಲಿತ ಚಂದಿರ

ಮಾತು ಕಲಿತ ಚಂದಿರ

ನೋಡಿ ಇವಳ ಅಂದನು 
"ಇಂಥ ಅಂದ ಚಂದವ 
ಹಿಂದೆ ಎಲ್ಲೂ ಕಾಣೆನು 
ಏನು ಅಂತ ಹೇಳಲಿ 
ಮಾತು ಹೊರಡದಾಗಿದೆ 
ಹೇಳಿ ಮುಗಿಸುವಲ್ಲಿಗೆ 
ಎಲ್ಲ ಬಾಕಿ ಉಳಿದಿದೆ"

ಜಂಬ ನೋಡು ಅವಳಿಗೆ 
ಪ್ರೇಮ ಕವನ ಆಲಿಸಿ 
ಕೆಂಪು ಗಲ್ಲ ಅವಳದು 
ಹವಳವನ್ನೂ ಸೋಲಿಸಿ 
ನೂರು ಕಣ್ಣ ನವಿಲಿಗೆ 
ಇವಳ ಹಬ್ಬುವಾತುರ 
ನಶೆಯು ಖೈದಿಯಾಗಿದೆ 
ಇವಳ ಕಣ್ಣೇ ಪಂಜರ 

"ಗಾಳದಲ್ಲಿ ಸಿಲುಕಿದ 
ಮತ್ಸ್ಯ ಹೃದಯ ನನ್ನದು 
ನರಳುವಂತೆ ಮಾಡಿದೆ 
ಎಲ್ಲ ಹೊಣೆಯೂ ನಿನ್ನದು 
ಇರುಳ ಮೀರಿ ಇರಿಸಿದೆ 
ಲೋಕಕೆಲ್ಲ ಅಚ್ಚರಿ"
ಹೀಗಿ ನುಡಿದು ಹಗಲಿಗೂ 
ಹೆಗಲು ಕೊಟ್ಟ ಚಂದಿರ 

ಒಮ್ಮೆ ಮನೆಯ ಅಂಗಳ 
ಚೆಲ್ಲಿಕೊಂಡ ತಿಂಗಳ 
ಜಾರಿ ಬಿದ್ದು ತೊಟ್ಟಿಗೂ 
ತೊಡಿಸಿಬಿಟ್ಟ ಉಂಗುರ 
ನಡುವಲಿರಿಸಿ ಕೊಡವನು 
ಸಾಗುವಾಗ ಮೆಲ್ಲಗೆ 
ಕದ್ದು ಅಡಗಿ ಕೂತನು 
ಮೆಲ್ಲ ಇಣುಕಿ ಈಚೆಗೆ 

ಹೀಗೆ ಕಲಿತ ಮಾತಲಿ 
ರಾಗವನ್ನು ಬೆಸೆಯುತ 
ಇಂಪು ಬೆರೆಸಿ ತಂಪಿಗೆ 
ಹಾಡುತಿಹನು ಇರುಳಲಿ 
ಇವಳ ಎದೆಯ ಬಡಿತವು
ಪಕ್ಕ ವಾದ್ಯ ತಾಳಕೆ 
ಹೂವಿನಂತೆ ಅರಳುತ 
ಸೋಲುತಿಹಳು ಮೋಹಕೆ..

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...