ಸಂಧ್ಯಾರಾಗದಲಿ ನಿನ್ನ ಕೂಗುವೆನು
ಬಂದು ಹೋಗು ಒಮ್ಮೆ ಆತಿಥ್ಯಕೆ
ಮಿಂದ ಕಣ್ಣುಗಳಿನಿಂದ ಕಾಯುವೆನು
ತುಂಬು ಆಸೆಯಲಿ ಸಾಂಗತ್ಯಕೆ
ಮಲ್ಲೆ ಮಾಲೆಯ ಮುಡಿದು
ನೀಳ ಜಡೆಯುಟ್ಟು ರೇಶಿಮೆ ಬರುವಿಕೆಗೆ
ಸಂಜೆ ಮಾಗುತಿದೆ ಕೆಂಪು ಗಲ್ಲದಲಿ
ಮಾತು ಮೌನದ ತೆರೆಮರೆಗೆ
ಧೂಪ ಹಚ್ಚಿದ ಮನೆಯ ಅಂಗಳ
ಒಂಟಿ ಸ್ವಪ್ನವ ಕಾಣುತಿರೆ
ನಿನ್ನ ದಾರಿಯ ಎದುರು ನೋಟಕೆ
ಮನದ ಕಣ್ಣಿಗೂ ಮಂಜು ಪೊರೆ
ಬೆವರ ಸಾಲಿಗೆ ಸೆರಗ ಒಡ್ಡುತ
ಕೊರಳಿನಾಚೆಗೆ ಏದುಸಿರು
ನಿನ್ನ ನೆರಳಿನ ಸುಳುವು ಸಿಕ್ಕರೆ
ಹೋದ ಪ್ರಾಣಕೂ ನಿಟ್ಟುಸಿರು
ಕೋಪದಂತೆಯೇ ದೀಪ ತಣ್ಣಗೆ
ಕತ್ತಲಲ್ಲಿ ಕಣ್ಣೀರ ಹೊಳೆ
ಬೇಡ ಹೋಗು ನೀ ಮೋಸಗಾರ
ಎಂದೀಗಲಾದರೂ ಅನ್ನುವಳೇ?
ಬೆಳಗು ಮೂಡಿತು, ಎಚ್ಚರಾಯಿತು
ಹಣೆಯ ಮೇಲೆ ಮುತ್ತಿನ ಸ್ಪರ್ಶ
ಮಡಿಲಲಿರಿಸಿದ ನಲ್ಲ ಕನಸಲೇ
ಉಳಿದು ಹೋದ ನೀಗಿ ಸರಸ
ರಾಗ ಮಾಲಿಕೆ ಕಟ್ಟಿ ಕೂತಳು
ಸಂಜೆ ಪಾಲಿಗೆ ಮುಡುಪಿಡಲು
ನಲ್ಲ ಕಂಡ ನೆನಪಲ್ಲಿ ಮಿಂದು
ಸೊಗಸಾದ ಹಾಡಿನ ಗುರುತಿಡಳು!
No comments:
Post a Comment