Tuesday 4 August 2020

ಅವಳು ರೆಕ್ಕೆ, ನಾನು ಬೇರು

ಅವಳು ರೆಕ್ಕೆ, ನಾನು ಬೇರು 
ಹಾರಾಡಿದಷ್ಟೂ ಅವಳು 
ಆಳ ಹೊಕ್ಕಷ್ಟೂ ನಾನು 

ನನ್ನ ಅವಳ ಪರಿಚಯವಾದಾಗ 
ನಾನಿನ್ನೂ ನಾಳೆಯ ಚಿಗುರು 
ಆಕೆ ಬಲಿಯದ ರೆಕ್ಕೆ 

ಮೊದಮೊದಲು ಚಿಗುರಿದಾಗ 
ಹಸಿವೆಂದು ಸೇವಿಸಿದಳು 
ತಾನು ಮಾತು ಕಲಿತು 
ನನ್ನ ಜೊತೆ ಮುಳುಗಿದಳು 

ರೆಕ್ಕೆ ಬಡಿದು ಸೋತ ಲೆಕ್ಕ
ಬೇರು ಬೆತ್ತಲಾದುದರ ಲೆಕ್ಕ
ಎಂದೂ ಇಟ್ಟುಕೊಂಡವರಲ್ಲ 
ಇಟ್ಟರೂ ಹಂಚಿಕೊಂಡವರಲ್ಲ 

ನಾ ಗಟ್ಟಿಗೊಳ್ಳುತ್ತಾ ಹೋದೆ 
ಅವಳು ಎತ್ತರ ತಲುಪುತ್ತಾ 
ಒಬ್ಬರಿಂದೊಬ್ಬರಿಗೆ ಬಿಡುಗಡೆ ಸಿಕ್ಕು 
ರೂಪಾಂತರದ ಅಂತರ 

ಈಗಲೂ ನನ್ನ ಹೆಗಲ ಅರಸಿ
ಹಾರಿ ಬಂದು ಆಗೊಮ್ಮೆ, ಈಗೊಮ್ಮೆ 
ಕೊಕ್ಕಿನಿಂದ ಕುಟ್ಟುತ್ತಾಳೆ 
ಆದರೆ ನನಗೆ ನನ್ನದೇ ನೆವ 

ಅವಳ ಸಂಧಿಸಬೇಕೆಂದು 
ಬುಡಮೇಲಾಗಲು ತಯಾರಾಗಿದ್ದೆ 
ಆಗಲೇ ಅರಿವಾಗಿದ್ದು 
ಗೂಡು ಕಟ್ಟಿಕೊಂಡಿದ್ದಾಳೆಂದು 

ನಾನು ಸಿಕ್ಕ ಸಿಕ್ಕಲ್ಲಿ 
ನಾನಾ ಟಿಸಿಲೊಡೆದು ಸ್ವತಂತ್ರನಾಗಿದ್ದೆ 
ಆದರೆ ಆಕೆ ದಿಗಂತವ ತೊರೆದು 
ನನ್ನಲ್ಲೇ ಉಳಿದುಬಿಟ್ಟಳು 

ಅವಳ ಚಿಲಿಪಿಲಿಯಲ್ಲಿ 
ನನ್ನ ಚೈತನ್ಯದ ಗುರುತು 
ನನ್ನ ಮೌನವೆಲ್ಲ 
ಕೇವಲ ಅವಳ ಕುರಿತು.... 

ಯಶ್ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...