ನನ್ನ ಮನೆಯ ಹಿತ್ತಲಲಿ
ಚಿಟ್ಟೆ ಗೂಡ ಸೀಳುತಿದೆ
ಅಲ್ಲೇ ಮರದ ಟೊಂಗೆಯಲಿ
ಹಕ್ಕಿ ಗೂಡ ಕಟ್ಟುತಿದೆ
ಟಿಸಿಲೊಡೆದ ಬಳ್ಳಿ ತಾನು
ಮುಳ್ಳು ತಂತಿಯ ಹಬ್ಬುತಿದೆ
ಕಾವು ಪಡೆದ ಮೊಟ್ಟೆಯಲಿ
ಜೀವ ಮೈಯ್ಯಿ ಮುರಿಯುತಿದೆ
ನನ್ನ ಮಣ್ಣಲಿ ಬೇರೂರಿ
ಮಗ್ಗಲು ಮಣ್ಣಿಗೆ ಮನಸೋತು
ಸೀಬೆ ಮರ ಬಾಗಿಹುದು
ನಾಲಗೆ ಚಪ್ಪರಿಸಿಹುದು
ಘಮ ಘಮ
ಸುತ್ತಲ ಆವರಣ
ಸುಗಂಧ ಸೂಸಲು ಹೂಗಳು
ಗಡಿದಾಟಿ ಹೊರ ನಡೆಯುತಿದೆ
ಶತ್ರುವಿಗೂ ಸಮ ಪಾಲು
ಜಾಡಿನ ಆಜು ಬಾಜಿನಲಿ
ಗರಿಕೆಗೆ ಇನ್ನೂ ಸುಖ ನಿದ್ದೆ
ಕಾಲಡಿ ಸಿಲುಕಿ ಹೊಸಕಿದರೂ
ಚಿಗುರುವ ಚಾಳಿ ಇದ್ದಿದ್ದೇ
ಮುಂಬಾಗಿಲಿಗೆ ಚಂದ ಬಣ್ಣ
ಮತ್ತದರ ಗುಟ್ಟಾದ ಕೀಲಿ
ಹಿತ್ತಲ ಬಾಗಿಲ ಕೊಕ್ಕೆಯ ಕಿಲುಬು
ಕೊಳ್ಳೆ ಹೊಡೆತಕೆ ಸಿಕ್ಕ ಜವಾಬು
ಅಟ್ಟದಲಿ ಕೂಡಿಟ್ಟ ಚಿನ್ನ ಮಣ್ಣು
ಮಣ್ಣಿನಲಿ ಹೂತರೆ ಬೀಜ ಹೊನ್ನು
ಹಸಿವಿಗೆ ಹೊಲ, ನಿದ್ದೆಗೆ ಗುಡಿಸಲು
ಅರಿವಿಗೆ ಹಿತ್ತಲ ಗಿಡ ಮದ್ದು...
No comments:
Post a Comment