Tuesday, 4 August 2020

ಮೋಡದ ನೆರಳು ಬೆಟ್ಟದ ತುಂಬ




















ಮೋಡದ ನೆರಳು ಬೆಟ್ಟದ ತುಂಬ
ಮೂರೇ ಹೆಜ್ಜೆಗೆ ಆ ತುದಿಗೆ
ಆ ಬೆಟ್ಟದಿ ಈ ಬೆಟ್ಟದ ಬಿಂಬ
ರಸ್ತೆಯ ತಿರುವಿನ ಮುಗುಳು ನಗೆ

ದೂರದ ನೋಟಕೆ ಬಾಗಿದ ಬಾನು
ಹತ್ತತ್ತಿರ ಮತ್ತದೇ ದೂರ
ಹಬ್ಬಿದ ಕಾಡು ಹಕ್ಕಿಯ ಗೂಡು
ಬಣ್ಣ ಎರಚಿದ ಚಿತ್ತಾರ

ಬಾಗಿಲುಗಳ ಬಡಿದೆಚ್ಚರಿಸುವ ಮಳೆ
ಬಂತೆಂಬಂತೆಯೇ ಸಾಗುತಿದೆ
ಹುಲ್ಲಿನ ತೊನೆದಾಟವ ಗಮನಿಸುತ
ಕಲ್ಲೂ ಕವಿತೆಯ ಬಯಸುತಿದೆ 

ಎಚ್ಚರ ತಪ್ಪಿದ ಮನಸುಗಳೆಷ್ಟೋ
ಇಲ್ಲೇ ಮನೆಯ ಮಾಡಿಹವು
ನೆಪಗಳ ಸೀಳಿ ತಪಗೈಯ್ಯುತಲಿವೆ 
ಬಂಡೆಯ ಮೇಲೂ ಅರಳಿದ ಹೂ

ನೆಟ್ಟ ಗಡಿಗಳು ಉರುಳಿ ಬಿದ್ದಿವೆ
ಚಾಚಿದ ಬೇಲಿ ಇರುವೆಯ ಸಾಲು
ಹಸಿದ ಕಣ್ಣಿಗೆ ಪ್ರಕೃತಿ ತಾಯಿ
ಎರೆದಂತಿಹಳು ಎದೆಯ ಹಾಲು

ಏರುವಾಗ ಎರವಲು ದಣಿವು 
ಇಳಿಜಾರಲಿ ಉರುಳುವ ಸೊಗಸು 
ಬೆಟ್ಟದ ತುದಿಯಿಂದೆಲ್ಲವೂ ತೃಣವೇ 
"ನಾನು" ಎಂಬುದು ಒಣಮೆಣಸು 

ಮುಗಿಯಿತೆಂದೆನಿಸಿದವುಗಳ ಹಿಂದೆ 
ಎಷ್ಟೋ ಅರಳಿದ ಕವಲುಗಳು 
ಒಂದೇ ದಾರಿಗೆ ಸೀಮಿತಗೊಂಡರೆ 
ಮೂಡವು ಹೆಜ್ಜೆ ಗುರುತುಗಳೂ... 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...