ಹೆಚ್ಚು ಸಿಹಿಯ ಬೆರೆಸಿಕೊಳ್ಳುವ ಒಲವಿನ ಶರಬತ್ತಿಗೆ
ಕೆಟ್ಟ ಕನಸು ಮುಗಿದ ಕೂಡಲೇ ಆದ ಎಚ್ಚರದಂತೆಯೇ
ಕೊಟ್ಟ ಮನವ ಮರಳಿ ಪಡೆದು ನಡೆಸುವ ಮರುಗುತ್ತಿಗೆ
ಸಣ್ಣ ಕತೆಯಲಿ ರೋಚಕತೆಯನು ಬೆರೆಸಿಕೊಳ್ಳುತ ಹೇಳುವೆ
ಉತ್ಸುಕತೆಯನು ತಾಳುವಂತೆ ಮಾಡಿಕೋ ತಾಲೀಮನು
ಹಿಂದಿನಂತೆ ಸಂಜೆಗಳು ಬೇಸರಿಕೆ ತರಿಸದೆ ಕಾಯುವೆ
ಇಂಚು ಇಂಚಿನ ಅಂತರಕ್ಕೂ ಇಟ್ಟು ಸುಂಕದ ಮುತ್ತನು
ಕಣ್ಣ ಹನಿಗಳ ಲೆಕ್ಕವಿರಿಸಿ ದಣಿದ ಬೆರಳುಗಳಾವುವೂ
ಇನ್ನು ಮುಂದೆ ಕೆನ್ನೆ ಸೋಕಲು ಹಿಂಜರಿಯದೆ ಉಳಿಯಲಿ
ಬೆಟ್ಟದಷ್ಟು ನಗೆಯ ಉಕ್ಕಿಸೋ ವಿಷಯವ ಹೊತ್ತಿರುವೆನು
ಸಿಲುಕದಿರಲಿ ಕಮಲ ನಯನ ತುಮುಲಭರಿತ ಸುಳಿಯಲಿ
ಹೆಚ್ಚೆಂದರೆ ಹಚ್ಚಿ ಕೂರುವ ದೀಪದೆದುರು ಬದಿರಲಿ
ತಂಪು ಇರುಳಲಿ ಬೆಚ್ಚಗುಳಿಯಲು ಇಚ್ಛೆಯೊಂದಿಗೆ ಅಪ್ಪುತ
ತಪ್ಪುಗಳು ತಪ್ಪೆನುಸುವನಕ ತಪ್ಪಲ್ಲದ ತತ್ವದಡಿಯಲಿ
ತುಟಿಗೆ ತುಟಿಯ ಗುರುತನಿಟ್ಟು ಮಗ್ನರಾಗುವ ಹಿಗ್ಗುತ
ಹೇಳು ಸಹಮತವಿದೆಯೇ ಎಂದು ಉಸಿರ ಕಾಟ ಹೆಚ್ಚಿದೆ
ಹಳೆ ನೆನಪುಗಳನ್ನು ಹೊತ್ತು ಭಾರವಾಗಿದೆ ಕೆಚ್ಚೆದೆ
ಒಮ್ಮೆಗೆಲ್ಲವ ಮುಗಿಸಲಾಗದು ಹಂತ ಹಂತದಿ ಮುಳುಗುವ
ಮುರಿದ ಏರು ಮೆಟ್ಟಿಲುಗಳು ಇಲ್ಲ ವಿಧಿ ಇಳಿಜಾರದೆ
No comments:
Post a Comment