Wednesday, 26 August 2020

ಹೇಗೆ ಪಾರಾಗಲಿ ಮೋಹದಿಂದ?

ಹೇಗೆ ಪಾರಾಗಲಿ ಮೋಹದಿಂದ?

ಸಿಲುಕಿದಲ್ಲೇ ಸುಖವ ಕಾಣುವಾಗ 
ತಾಕಿ ಹೆಚ್ಚಿತು ಪುಳಕ ಆದ್ದರಿಂದ 
ಅಂಟಿ ಕೂರುವೆ ನಿನ್ನ ನೆನಪಿಗೀಗ

ಎಲ್ಲಿ ಕದ್ದೋಡಲಿ ಕಾಣದಂತೆ?
ನಿನ್ನ ನೆರಳು ನನ್ನ ಹಿಂಬಾಲಿಸೆ 
ಮೌನ ದಂಡೆಯ ಧ್ಯಾನ ವ್ಯರ್ಥವಿಲ್ಲಿ 
ನಿನ್ನನುಪಸ್ಥಿತಿ ಕೂಡ ಮಾತಾಡಿಸೆ

ಏಕೆ ಮೂಡದು ಇರುಳು ಕಣ್ಣುಗಳಿಗೆ?
ಮುಚ್ಚಿದರೂ ಆವರಿಸಿದಾಗ ನೀನು 
ನನ್ನಲ್ಲಿ ಉಳಿದು ಮುನ್ನಡೆಸಿದಂತೆ 
ನಿನ್ನಲ್ಲೂ ಆ ಸ್ಥಾನ ಪಡೆಯಲೇನು?

ಎಲ್ಲಿಗೆಲ್ಲಿಯ ನಂಟು ಉಂಟಾಯಿತು 
ಪ್ರೀತಿ ಹುಚ್ಚರಿಗಷ್ಟೇ ಒಲಿವುದಂತೆ?
"ಹುಚ್ಚು ಪ್ರೀತಿ" ಎಂದು ಕರೆಯೋ ಬದಲು 
ತಿರುಚುವುದು ಪ್ರೇಮಿಗೆ ಸುಲಭವಂತೆ

ಉತ್ತರಗಳಿಲ್ಲದ ಪ್ರಶೆಗಳಿಗೆ 
ಪ್ರತ್ಯುತ್ತರವ ನೀಡಿ ಬಿಡುವು ಕೊಡುವ 
ನಂತರಕೆ ಗೊಡವೆಗಳು ಇದ್ದೇ ಇರಲಿ 
ಬಂದದ್ದ ಬಂದಂತೆ ನೋಡಿಕೊಳುವ 

ಹೆಣೆದ ಜಾಲದಿ ಕಾಲು ಜಾರಿಕೊಂಡೂ 
ಎಚ್ಚರ ಉಳಿವುದು ಪಕ್ವ ಪ್ರೇಮ 
ಮಿಕ್ಕ ವಿಷಯಗಳಾವೂ ಮುಖ್ಯವಲ್ಲ 
ಪ್ರಣಯವಿಲ್ಲದ ಪಯಣ ಸತ್ವಹೀನ 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...