ಕತೆ ಹೇಳುವೆ ಕೇಳು ಕಂದ
ಒಂದೂರಲ್ಲಿ ಒಬ್ಬ ರಾಜ
ಹೃದಯ ಶ್ರೀಮಂತಿಕೆಯಿಂದ ರಾರಾಜಿಸಿ
ಸಾತ್ವಿಕ ಪಯಣ ಮುಗುಸಿದ
ಮನ ಮಿಡಿಯುವ ಕತೆ
ಯಾರ ಕುರಿತು? ಮುಂದೆ ಕೇಳು..
ಯಾವ ದೇವರು ತಾನೆ ಹರಕೆ ಹೊರದೆ
ಅರಸಿ ವರವ ಕೊಡುವ ಹೇಳು?
ಈ ದೈವ ಆ ಸಾಲಿಗೆ ಸೇರದೆ
ಕೇಳದೆಯೇ ಬೇಕುಗಳ ಅರಿತ
ಪ್ರೇಮ ಪರ್ವಕೆ ಕಾರಣನಾದ
ಕೊಡುಗೈ ಕುರುಡು ಮರುಕ್ಷಣ;
ಕಿಸೆಯಲಿ ಅದೆಷ್ಟು ಪ್ರೀತಿ, ಮಮತೆ ಹೊತ್ತು
ಉದಾರವಾಗಿ ಕಟ್ಟಿಕೊಡುತಿದ್ದ
ಬದುಕಿನ ದಾರಿಯುದ್ದಕ್ಕೂ, ಸಾಹುಕಾರ!
ಮಲಗಿದಾಗ ಪುಟ್ಟ ಪೋರ..
ಎರಗಿದ ಯುದ್ಧಗಳನ್ನು ಜಯಿಸಿ
ಮರಳಿ ಮುಳ್ಳಿನ ಹಾಸಿಗೆಯ ಕನವರಿಕೆಗಳಲ್ಲೂ
ತನ್ನವರು ಕಾಣದ ನೆರಳಿಗೆ
ನರಳಿದಾತನೇ ಹೊರತು.. ತನಗಾಗಿ?
ಅನ್ನ ಕೊಟ್ಟ ಮಣ್ಣಿನಂತೆ
ಬದಲಿ ಏನೂ ಕೇಳದ ಗುಣ
"ಮತ್ತೂ ಬೇಕಾದಲ್ಲಿ ಕೇಳು"ಎನ್ನುವ
ಕರ್ಣನಿಗೂ ಮಿಗಿಲಾದ ಸ್ಥಾನ
ಎಲ್ಲ ಪುಣ್ಯಗಳೂ ನಗಣ್ಯ
ಚರಣ ಸೋಕುವುದೇ ಪರಮ ಪುಣ್ಯ;
ಹಿತ ನುಡಿಯ ನೆನೆಪಿನ ಪುಟಗಳ
ಗೀಚು ಹೊತ್ತಿಗೆ ಹಿಡಿದ ನಾನೇ ಧನ್ಯ
ಪ್ರೀತಿ ಕೊಟ್ಟು ಪಡೆವುದಲ್ಲ
ಕೊಡುವುದಷ್ಟೇ ನೇಮವೆಂದು
ನಗೆ ಬೀರುವ ಸಂತ;
ಕಲ್ಲು ಬೀಸಲು ಹಣ್ಣು ಕೊಡುವ
ಯಾವ ಅಲ್ಪವೂ ಗೋಚರಿಸದ
ನಿಜದಿ ಕಲ್ಪವೃಕ್ಷ ಮಾನವ ರೂಪಿ ದೇವನೇ ಈತ..
ತಿಳಿದವರಿಗೆಲ್ಲ ಒಂದೇ ಸತ್ಯ
ದ್ವಂದ್ವವಿಲ್ಲ, ಬಣ್ಣದ ಮಾತಿಲ್ಲ
ತನ್ನಲ್ಲಿಹುದೆಂದು ಹಿಗ್ಗಲಿಲ್ಲ
ಕನ್ನ ಹಾಕುವ ಮಾತೇ ಇಲ್ಲ;
ಐದು ತಲೆಮಾರುಗಳ ಕಂಡ ಕಣ್ಣೊಳಗೆ
ಅದೇ ಮೃದುತ್ವ, ಅದೇ ಮಾತೃತ್ವ!
ನೆಲಕೆ ತಲೆ ಬಾಗಿ, ಹೊನ್ನ ಗಳಿಸಿ
ಕಟ್ಟಿದ ಸಾಮ್ರಾಜ್ಯದೊಳಗೆ ನಿತ್ಯ ದಾಸೋಹ;
ಫಸಲಿರುವೆಡೆ ಬೆಳೆದ ಕಳೆಯನ್ನು
ನಾಜೂಕಾಗಿ ಬೆರ್ಪಡಿಸಿ
ಸುಗುಣ ಬೇರಿಗೆ ತನ್ನ ಬೆವರ ಕೊಟ್ಟ
ಸಣ್ಣ ಮೀಸೆ, ಮಂದಹಾಸ
ತುಂಬು ಕುರುಳು, ತೀಕ್ಷ್ಣ ಮೂಗು
ತೇಜಸ್ವಿ ಮುಖ, ಬಿಳಿ ವಸ್ತ್ರ
ಊರುಗೋಲು, ತೂಕ ಹೆಜ್ಜೆ
ಮುದ್ದು ಮುನಿಸು, ಮನಸು ಕೂಸು
ಸಮಯ ಪ್ರಜ್ಞೆ, ಅಚ್ಚು ಕಟ್ಟು
ಹೊತ್ತು ಮೀರಲು ಪುಟಿವ ಸಿಟ್ಟು
ಈ ರಾಜನ ಕೆನ್ನೆಗೆ ಮುತ್ತಿಟ್ಟು
ಕುರುಚಲು ಗಡ್ಡ ಚುಚ್ಚಿ ಅತ್ತಿದ್ದೆ
ಮಡಿಲಲಿ ಮಗುವಾಗಿ ಮಲಗಿದ್ದೆ
ಹೆಗಲೇರಿ ಕುಣಿದಿದ್ದೆ, ದಣಿದಿದ್ದೆ
ಏಟನು ತಿಂದಿದ್ದೆ, ಮುತ್ತನ್ನೂ ಪಡೆದಿದ್ದೆ
ಕೈ ತುತ್ತಿಗೆ ಹಸಿದಿದ್ದೆ
ಈಜಿದ್ದೆ ಜೊತೆಗೆ
ಮೋಟಾರ್ ಬೈಕು ಕಲಿತಿದ್ದೆ
ತಪ್ಪುಗಳ ತಿದ್ದಿದ ಗುರು
ನನ್ನ ಅಸ್ತಿತ್ವದ ಗುರುತು
ದೂರ ಪ್ರಯಾಣಗಳ ಒಡನಾಡಿ
ಮೌನ ಸಂವಾದದ ಸಾರತಿ
ಅಪ್ಪ, ಅಮ್ಮ, ಗೆಳೆಯ, ಬಂಧು
ಎಲ್ಲರನೂ ಒಳಗೊಂಡ ಈತ
ತಾರೆಗಳ ಜೊತೆಗೂಡಿ ಮಿನುಗಲು
ಖಾಲಿತನವೇನೆಂದು ತಿಳಿಸಲು
ತಾನಿರದೆ ಬದುಕುವುದ ಕಲಿಸಲು
ಒಂದಿಷ್ಟು ದುಃಖವನು ಭರಿಸಲು
ಮತ್ತೆ ಸಿಗುವೆ ಎಂದು ನೇಪಥ್ಯಕ್ಕೆ ಸರಿದ;
ಅವನದೇ ಕತೆಯಿದು ಕೇಳು ಕಂದ
ಹೇಳುವೆ ತುಂಬು ಉತ್ಸಾಹದಿಂದ....
No comments:
Post a Comment