ರಾತ್ರಿ, ಹಗಲು ನಿದ್ದೆಗೆಟ್ಟು
ಬಂದು ಹೋದವರನು ಬಿಟ್ಟು
ಬೀದಿ ದೀಪದಡಿಗೆ ನಗುವ ರಸ್ತೆಯೇ
ಸುಟ್ಟ ಬಿಸಿಲಿಗಾದೆ ಕಪ್ಪು
ಬಿದ್ದ ಮಳೆಗೆ ಚೂರು ತಂಪು
ಕೊರೆವ ಮಂಜಿನೊಡವೆಯುಟ್ಟ ರಸ್ತೆಯೇ
ಹಕ್ಕಿ ಪಿಕ್ಕೆಯಿಟ್ಟರೂನು
ಬೀಡಿ ತೊಟ್ಟು ಬಿದ್ದರೂನು
ಏನೂ ಆಗದಂತೆ ಉಳಿದ ರಸ್ತೆಯೇ...
ಅಕ್ಕ ಪಕ್ಕ ಅಡ್ಡ ರಸ್ತೆ
ಮಿಗಿಲು ನೀನೇ ಮುಖ್ಯ ರಸ್ತೆ
ನೀನು ಬಂದ್ ಆದರೆ ಅವಸ್ಥೆಯೇ!
ಹೊಂಡವಾಗಿ ಹಬ್ಬಿದೆ
ನಿನ್ನ ಆಚೆ ಈಚೆಗೆ
ಗದ್ದೆ ಕೆಸರ ರಾಚುವಂತ ರಸ್ತೆಯೇ
ಸದ್ದು ಮಾಡಿಕೊಂಡರೂ
ನಿದ್ದೆಯಲ್ಲಿ ಬಂದರೂ
ಚೂರೂ ಜಗ್ಗಲಿಲ್ಲವಲ್ಲ ರಸ್ತೆಯೇ
ನಿನ್ನ ನಂಬಿ ಬದುಕುವ
ತೇಪೆ ಹಾಕೋ ಕೈಗಳ
ನೀನೇ ಹಿಡಿಯಬೇಕು ಕೇಳು ರಸ್ತೆಯೇ
ಇದ್ದ ನಿನ್ನ ಚರ್ಮವ
ಸುಲಿದು ಮತ್ತೆ ಹಾಸಿದ
ಗುತ್ತಿಗೆದಾರನೆಲ್ಲಿ ರಸ್ತೆಯೇ?
ನೀನು ಇರಲು ಸಾಲದೆ
ಪಾದಚಾರಿ ಮಾರ್ಗಕೂ
ಚಕ್ರ ತಾನೇ ಉರುಳುತಾವೆ ರಸ್ತೆಯೇ
ಸೂರು ಇಲ್ಲದವರನು
ಭಾರ ಭೂಮಿಗೆನ್ನುತ
ಮಣ್ಣ ಮುಕ್ಕಿಸುವರು ನೋಡು ರಸ್ತೆಯೇ
ಸ್ವಲ್ಪ ಕಾಲ ಹೋದರೆ
ನೀನೇ ಅಲ್ಪವೆನ್ನುತ
ನೆರಳು ಕೊಟ್ಟ ಮರವೇ ಮಾಯ ರಸ್ತೆಯೇ
ಬಳಿಕ ಬಳಕೆದಾರರು
ಸುಂಕ ಕಟ್ಟಿ ಸತ್ತರು
ವರ್ಷ ಪೂರ್ತಿ ಇನ್ನು ನೀ ದುರಸ್ತಿಯೇ...
No comments:
Post a Comment