ಶಿರವಿಲ್ಲದ ಶಿಲೆಯೊಂದನು ಮನೆಯಲಿ ತಂದಿಟ್ಟೆ
ಮೈ ಬಿರುಕಿಗೆ ಹಿತ್ತಲ ಮಣ್ಣಿನ ಮುದ್ದೆಯ ಕೊಟ್ಟೆ
ತುಂಡರಿಸಿದ ಕೈ ಏನನ್ನೂ ಬೇಡದೆ ಹೋದರೂ
ಕ್ಷಮೆ ಕೋರಿ ಮಲ್ಲಿಗೆ ಬಳ್ಳಿಯ ಗಂಧವನಿಟ್ಟೆ
ಕತ್ತಿನ ಮೇಲೆ ಇಟ್ಟ ತಲೆಗಳ ಲೆಕ್ಕವೇ ಇಲ್ಲ
ಕತ್ತರಿಸಿದ ಖಡ್ಗಗಳ ಪಳೆಯುಳಿಕೆಯ ಪಾಡು
ಸೂರ್ಯ, ಚಂದ್ರರ ಪ್ರಭಾವಳಿಯ ಹೊತ್ತರೂ
ಮತ್ತದೇ ನೀರವತೆ, ಅದೇ ನಿಶಬ್ಧ, ತಟಸ್ಥ ನಿಲುವು
ಹಸಿದವರ ಹಸಿವ ಕದ್ದು ಹೊಟ್ಟೆ ಬೆನ್ನಿಗಂಟಿ
ಜಗದ ಬೆತ್ತಲೆಯ ಮುಚ್ಚಿ ತಾ ದಿಗಂಬರನಾಗಿ
ಉರುಳಿದ ತಲೆ ಎಲ್ಲೋ ಇನ್ನೂ ನಗುತಿರಬೇಕು
"ಕಲ್ಲನ್ನೂ ಬಿಡದೆ ಹೋದೆಯಾ ಮರುಳ?!" ಎಂದು
ಉಂಗುಟದಿ ಅರಳಿಕೊಂಡ ಅಣಬೆಯ ಬೆರಗು
ಹೊಕ್ಕಳಲ್ಲಿ ಸಣ್ಣದೊಂದು ಇರುವೆಯ ಗೂಡು
ಎದೆ ಸೀಳಿನ ನಡುವಲ್ಲಿ ಬೇರು ಬಿಟ್ಟ ಚಿಗುರು
ಮೈ ತಡವಿ ಪಸೆಯಾಗಿ ಉಳಿದ ಮಳೆ ನೀರು
ನನ್ನ ಗ್ರಹಿಕೆಯ ಪ್ರಕಾರ, ಶಿಲೆ ಎಂದೋ ಸತ್ತಿದೆ
ಬದುಕಿದ್ದರೆ ತಾನಷ್ಟೇ ಬದುಕು ಕಟ್ಟಿಕೊಳ್ಳುತಿತ್ತು
ಕಟ್ಟಿಕೊಳ್ಳ ಬಂದವರ ಅಪ್ಪಿಕೊಳ್ಳುತಿರಲಿಲ್ಲ
ಶಿಲೆ ಎಂದೋ ಸತ್ತ ಕಾರಣ, ಇನ್ನೂ ಜೀವಂತವಾಗಿದೆ
ಇಟ್ಟ ಹೆಸರಲಿ ಕರೆಸಿಕೊಂಡೂ ನಿರ್ಲಿಪ್ತ
ಉಳಿಯ ಪೆಟ್ಟು ಕಾಣದಂತೆ ಅರಗಿಸಿಕೊಂಡು
ಇತಿಹಾಸ ಮೆರೆಸಬಲ್ಲ ಶಾಸನವೂ ಅಸ್ಪಷ್ಟ
ಒಂದೇ ಭಂಗಿಯಲಿ ಅಸಂಖ್ಯ ಭಾವ ಸೂಸಿದ
ಬೇಡದೆ ಬಿಟ್ಟವರನ್ನು ದೂರದ ಸಂತ
ತಮ್ಮದಾಗಿಸಿಕೊಂಡವರ ನೆನಯದ ಧೀಮಂತ
ನಂಬಿದವರ ಪಾಲಿಗೆ ಪೊರೆವ ಭಗವಂತ
ಯಾವ ಸಿರಿ ತನ್ನದಲ್ಲದಿದ್ದರೂ ಸಿರಿವಂತ..
No comments:
Post a Comment