Monday, 26 July 2021

ನನ್ನೊಡನೆ ನಾ ಮಾತಾಡಿದಂತೆ

ನನ್ನೊಡನೆ ನಾ ಮಾತಾಡಿದಂತೆ

ನಿನ್ನೊಂದಿಗೂ ಮಾತಾಡುವೆ
ನನ್ನೊಡನೆ ನಾ ಕಾದಾಡಿದಂತೆ
ನಿನ್ನೊಂದಿಗೂ ಕಾದಾಡುವೆ
ನನ್ನೊಳಗೆ ಮೂಡೋ ಸಂತೋಷವನ್ನು
ನಿನ್ನೊಂದಿಗಷ್ಟೇ ಹಂಚಿಕೊಳ್ಳುವೆ
ನನ್ನಲ್ಲಿ ಬಿಟ್ಟ ಬಿರುಕನ್ನು ನಿನ್ನತ್ತ 
ವ್ಯಾಪಿಸದಂತೆ ಕಾಯುವೆ

ಬೇಕೆಂದು ಬಚ್ಚಿಟ್ಟ ಗುಟ್ಟುಗಳು ರಟ್ಟಾಗಿ
ಆಗೊಮ್ಮೆ, ಈಗೊಮ್ಮೆ‌ ಸಿಡಿದೇಳುವೆ
ಸಾಕೆಂದು ಎತ್ತಿಟ್ಟ ಪುಸ್ತಕದ ನಡುವೆಲ್ಲೋ
ಪ್ರೇಮ ಸಂದೇಶವ ಗೀಚಿ‌ ಇಡುವೆ
ಆಗಂತುಕ ನಾನು ಬದುಕುಳಿಯುವ ತನಕ
ನಿಜವಾದ ನಾನಾರೋ ನಾನರಿಯೆನು
ಬತ್ತಿದ ಹಣತೆಯಲಿ ನನ್ನಿಟ್ಟು ಹೊತ್ತಿಸು
ಪ್ರಶ್ನಿಸದೆ ಕ್ಷಣ ಕಾಲ ನಾನುರಿವೆನು

ಮೊಂಡನೋ, ಹುಂಬನೋ, ಹಠದಿ ನಿಸ್ಸೀಮನೋ
ಹಿಡಿದು ತೋರಿಸು ಕನ್ನಡಿಯ
ನನ್ನ ನನಗೇ ಬಿಂಬಿಸಿ ತರುವಾಯ
ಕಣ್ಣಲಿ ಕಣ್ಣಿಟ್ಟು ಪ್ರೀತಿಸೆಯಾ?
ವಿಷಯಾಂತರ ಮಾಡುವೆ ಬೇಕಂತಲೇ
ಒಲ್ಲದ ವಾದಕೆ ನಿಂತರೆ ನೀ
ರೂಪಾಂತರಗೊಳ್ಳುವುದು ಆವರಣ
ಬಿಟ್ಟು ಬರಲು  ಕಣ್ಣ ಕಂಬನಿ...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...