Monday 26 July 2021

ಪದ ಕಟ್ಟೋದಲ್ಲ ಮನ್ಸಿನ್ ಕದ ತಟ್ಟಿ ನೋಡು

ಪದ ಕಟ್ಟೋದಲ್ಲ ಮನ್ಸಿನ್ ಕದ ತಟ್ಟಿ ನೋಡು 

ಮದ ಗಿದ ಹಂಚೊದಲ್ಲ ಮುದ ನೀಡಿ ನೋಡು 
ಬೇಕು ಬೇಕು ಅಂತ ಆಂಗ್ಲ ಪದ ಬೆರ್ಸೋದ್ಯಾಕೆ?
ಆಗೋದಿಲ್ವಾ ಕನ್ನಡ್ದಲ್ಲೇ ರ್ಯಾಪ್ ಮಾಡೋದಕ್ಕೆ
  
ರಾಗಿ ಮುದ್ದೆ ಜೊತೆ ಮುರಿ ಖಡಕ್ ರೊಟ್ಟಿ ಕೂಡ  
ನೀರ್ ದೋಸೆ ಮೀನ್ ಸಾರು ಘಮ್ಮತ್ತು ನೋಡಾ
ಕರಾವಾಳಿ, ಬಯ್ಲು ಸೀಮೆ, ಮಲೆನಾಡು ಅಂದ
ಬಗೆ ಬಗೆ ಸೊಗಡಿನ‌ ನಮ್ಮ ಕನ್ನಡ ಚಂದ

ಬಿಸಿಬೇಳೆ ಬಾತ್, ಉಡುಪಿ ಹೋಟೆಲ್ ಇಡ್ಲಿ ವಡೆ 
ಬಿಸಿ ಕಾಫಿ ರುಚಿ ಚಿಕ್ಕಮಗಳೂರಿನ್ ಕಡೆ 
ಸಿಹಿ ಕುಂದಾ, ಧಾರ್ವಾಡ್ ಪೇಡ, ದಾವಣಗೆರೆ ದೋಸೆ 
ಸಕ್ರೆ ಮಂಡ್ಯ, ಮೈಸೂರ್ ಪಾಕ್, ನಮ್ ಕನ್ನಡ ಭಾಷೆ 

ತೆಂಗು, ರೇಷಿಮೆ, ಶ್ರೀಗಂಧ, ಬಂಗಾರ ಬೆಲೆ  
ಜೋಳ, ರಾಗಿ, ಬತ್ತ, ವಿವಿಧ ತರ್ಕಾರಿ ಬೆಳೆ
ಕೃಷ್ಣೆ, ತುಂಗೆ, ಕಾವೇರಿ ನಮ್ಮ ಮಣ್ಣಿನ ಸಿರಿ 
ಇದ ಸಾರಿ ಹೇಳಿ ಎಲ್ಲ ಕನ್ನಡಿಗರಾಗಿರಿ 

ಚನ್ನಪಟ್ಟಣದ ಗೊಂಬೆ, ಮಾತನಾಡೋ ಜೀರ್ಜಿಂಬೆ
ದಟ್ಟಾರಣ್ಯದ ಹೊದಿಕೆ, ಮೃಗಗಳ ಸಂಕುಲಕ್ಕೆ
ಶಿಲ್ಪ ಕಲೆಗಳ ಬೀಡು, ಜೀವಂತಿಕೆಯನು ನೋಡು
ಭೂಮಿ ಮೇಲೆ ಸ್ವರ್ಗದಂತೆ, ನಮ್ಮ ಚೆಲುವ ಕರುನಾಡು

ಮಿಲ್ಟ್ರಿ ಹೋಟಲ್ ಕಾಲ್ಸೂಪು, ಬೋಟಿ ಗೊಜ್ಜು ಸವಿ 
ಬಿರಿಯಾನಿ ಜೊತೆ, ನಾಟಿ ಕೋಳಿ ಜಮ್ಮಾಸ್ಬಿಡಿ 
ಸಾಕು ಸಾಕು ಅಂತ ಇನ್ನು ನಾಲ್ಕು ತುತ್ತು ಜಡಿ 
ಊಟದಲ್ಲೇ ಇದ್ದಾನಂತೆ ದೇವ್ರು ಮರೀಬೇಡಿ 

ಚೂಡಾ, ಮಿರ್ಚಿ ಬಜ್ಜಿ ತಿಂದು ಚಾ ಕುಡಿಯೋಣ ಬಾ 
ತಮಟೆ ಏಟು ಬಿತ್ತು ಅಂದ್ರೆ ಅಲ್ಲೇ ಕುಣಿಯೋಣ ಬಾ 
ಜಾತಿ-ಧರ್ಮ ಸೀಮೆ ದಾಟಿ ಒಂದಾಗೋಣ ಬಾ 
ಪ್ರೀತಿಗಿಂತ ಬೇರೆ ಧರ್ಮ ಇಲ್ಲ ಅನ್ನೋಣ ಬಾ 

ಕನ್ನಡನ ಬಿಟ್ಟು ಬಾಳೋವಂತ ಬಾಳೇತಕೆ 
ಕಲ್ಲು ಕಲ್ಲು ಕೂಡಬೇಕು ಬೆಟ್ಟ ಆಗೋದಕ್ಕೆ 
ಸಾಕು ಮಾಡು ಶೋಕಿಗಂತ ಮಾತನಾಡೋ ನುಡಿ 
ರಕ್ತ ಕಣಕಣದಲ್ಲೂ ತುಂಬು ಕನ್ನಡ ನುಡಿ 

ಶ್ರೀಮಂತ ಸಾಹಿತ್ಯಕ್ಕೆ ಸಿಕ್ತು ಜ್ಞಾನಪೀಠ
ಎಲ್ಲೇ ಇರ್ಲಿ ಹಾರಿಸ್ತೀವಿ ನಾವ್ ನಮ್ ಬಾವುಟ
ತಾಯಿಯಷ್ಟೇ ತಾಯಿ ಭಾಷೆಯನ್ನೂ ಪ್ರೀತ್ಸೋ ಗುಣ
ಇದು ಕನ್ನಡಿಗರಲ್ಲಿ ಕಾಣೋ ಹುಟ್ಟು ಗುಣ

ಯಾರೇ ಕಟ್ಟಿಕೊಳ್ಳಲಿ ಇಲ್ಲಿ ತಮ್ಮ ಬದುಕನ್ನ
ಬೇಡ ಅನ್ನಳು ಕನ್ನಡ ತಾಯಿ ಸಾಕು ಮಕ್ಳನ್ನ
ತಪ್ಪಾದ್ರೂ ಪರ್ವಾಗಿಲ್ಲ ತಿದ್ದೋದ್ ನಮ್ಮ ಲಕ್ಷಣ
ಸಂಕೋಚ ಬೇಡ ಬಳ್ಸೋದಕ್ಕೆ ಕನ್ನಡ ಭಾಷೆನ

ಅಭಿಮಾನ ತುಂಬಿ ಹೊಮ್ಮಿ ಬಂದು ಹಾಡಾಯಿತು 
ಕೋಗಿಲೆನೂ ಕೂಡ ಖುಷಿ ಪಟ್ಟು ಕೊಂಡಾಡಿತು
ಲೋಕಕ್ಕೆಲ್ಲ ಕೇಳೋ ಹಾಗೆ ಪದ ಹಾಡ್ತೀನ್ನಾನು 
ಯಾಕಂದ್ರೆ ನಾನೊಬ್ಬ ಸ್ವಚ್ಛ ಕನ್ನಡದವನು..

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...