ಹೆಬ್ಬೆರಳು, ತೋರ್ಬೆರಳು, ನಡುಬೆರಳು
ತಂತಿ ನುಡಿಸಿ ಸ್ವರ ಹೊಮ್ಮಿಸಿವೆ
ಉಂಗುರದ ಬೆರಳದ್ದು ಯಾವ ತಂಟೆ ಇಲ್ಲ
ಕಿರು ಬೆರಳ ಕಿಡಿಗೇಡಿತನ ನಡುನಡುವೆ
ಜೇನ ನಾದಕೆ ತೂಗುತ, ತೂಗುತ ತಲೆಯ
ತಾಳ ಹಾಕಲು ನೆರೆದ ಸಭಿಕರೆಲ್ಲ
ಮುತ್ತಿಕೊಂಡಿತು ಆಚೆ ನೆಟ್ಟ ಕಿರುಬೆರಳು
ತೊಪ್ಪೆ ಸದ್ದನು ಮಾಡಿತೊಂದು ತಂತಿ
ಇತ್ತ ನುಡಿಸುತಲಿದ್ದ ಬಾಕಿ ಉಳಿದವುಗಳು
ವಿಚಲಿತಗೊಂಡು ಸ್ವಸ್ಥಾನವನೇ ಮರೆತವು
ಕಿವಿಗೆ ಕೆಂಡವ ಕಾರೋ ಕೀರ್ತನೆಗಳು
ಮೆದುಳನ್ನು ಕದಡುವ ರಕ್ಕಸ ರಾಗ
ಪಕ್ಕವಾದ್ಯಗಳು ಪಕ್ವತೆಯ ಮರೆತವು
ತಬ್ಬಲಿ ತಬಲಾ ತಬ್ಬಿಬ್ಬುಗೊಂಡಿರಲು
ನಾದಸ್ವರದ ನಳಿಕೆ ನೆಲ ಕಚ್ಚಿತು
ಗಾನ ಶಿರೋಮಣಿಯರು ಬಿರಬಿರನೆ ಕಾಲ್ಕಿತ್ತು
ಗಾಳಿ ಸುರುಳಿ ಬಂದು ಗಿರಗಿರನೆ ತಿರುಗಿತ್ತು
ಶಾಮಿಯಾನ ಬಿದ್ದು ಸಿಲುಕಿದರು ಹಲವರು
ಶೃತಿ ಪೆಟ್ಟಿಗೆಯ ಪಾಡು ಕೇಳಿದವರಾರು!
ಕೆಂಪು ನೆಲಹಾಸಿನ ಕಾಲು ದಾರಿ
ಹೂ ಚೆಲ್ಲಿದವರಿಲ್ಲ, ತಮಟೆ ಏಟುಗಳಿಲ್ಲ
ಮರದ ಗೂಡೊಳಗೆ ಹಕ್ಕಿ ಮರಿ ನಿದ್ದೆಗೆ
ಎಚ್ಚರಗೊಳ್ಳುವವು ಉದುರಿದೆಲೆ ಸದ್ದಿಗೆ
ನೆಟಿಕೆ ಬಿದ್ದವು ಮುರಿದು ಲಟಪಟನೆ
ಪಳೆಯುಳಿಕೆ ಗಾಜಿನ ಪೆಟ್ಟಿಗೆಯ ಒಳಗೆ
ಯಾವ ಉಗುರಿಗೂ ಈಗ ಕಸಿವ ಹಂಬಲವಿಲ್ಲ
ಉಸಿರು ಕೇವಲ ಬದುಕುಳಿಯಲೆಂದೇ
ಎಲ್ಲರೊಳಗೂ ಒಂದೊಂದು ಮೆಲ್ಲುಲಿ
ಕಿವಿಗಳು ಹೆಚ್ಚು ಹಸಿದಂತೆ ಆಲಿಸುವಾಗ
ಎಲ್ಲರೂ ಹಾಡಿದರು, ಎಲ್ಲರೂ ಕೇಳಿದರು...
No comments:
Post a Comment