ಹೇಳಿಕೊಡಬೇಡ ಪ್ರೀತಿ ಮಾಡುವುದನ್ನು
ಮೂಡಲಿ ಅದಾಗಿಯೇ ಚಿಗುರಿನಿಂದ
ಸಾಧ್ಯವಾದರೆ ಹಬ್ಬುವಾಗ ನೀ ಮರವಾಗು
ಸಿಂಗರಿಸುವೆ ನಿನ್ನ ಹೂ ಅರಳಿಸಿ
ಕಚ್ಚಿ ಕೊಡಬೇಡ ಕಿತ್ತ ಹಣ್ಣನು ಹಾಗೆ
ನಿನ್ನ ಅಧರಾಮೃತವ ಬೆರೆಸಿ ಅದಕೆ
ಸವಿದು ಬಿಡುವೆ ಹಣ್ಣ ಸಹಜ ರುಚಿಯ
ಪರಮ ಸುಖಕೆ ಇಡುತ ಅಲ್ಪ ವಿರಾಮ
ಶಪಿಸದಿರು ಮಳೆಯನ್ನು ಒದ್ದೆ ಕೂದಲ ಒದರಿ
ಮುದ್ದೆ ಸೆರಗಂಚಿನಲಿ ಮುಖ ಸವರುತ
ಬರಗಾಲಕೆ ತತ್ತರಿಸುವುದು ಭೂ ಒಡಲು
ಶಾಂತವಾಗಲಿ ಕೋಪ ತುಸು ಮೆಲ್ಲಗೆ
ಕಣ್ಣೀರ ಇಡದಿರು ತೀಕ್ಷ ನುಡಿ ಆಡುತ
ಬಾಣದಂತೆ ಸೀಳಿಬಿಟ್ಟೀತು ಎದೆಯನ್ನು
ಹೃದಯವು ಈಗಷ್ಟೇ ಪೌರ್ಣಿಮೆಯ ಕಂಡಿದೆ
ಆಗಲೇ ಮೂಡದಿರಲಿ ಕಗ್ಗತ್ತಲು
ಅಪ್ಪುತ ಬೆನ್ನಿಗೆ ಕಲಿಸಿದೆ ಅಕ್ಷರಮಾಲೆ
ಉಗುರುಗಳ ಗೀರಿ, ಬಳಸಿ, ಕೊಂಬನು ಕೊಟ್ಟು
ಬೆನ್ನಿಗೆ ಬೆನ್ನೊರಗಿಸಿ ಪಾಠ ಮಾಡದಿರು
ಕಣ್ಣೊಳಗೆ ಕಣ್ಣಿಡು ಹತ್ತುವುದು ತಲೆಗೆ
ಬಿಂದಿಗೆಯ ಹೊತ್ತು ತಾ ಮೇಲೆತ್ತುವ
ಬಾವಿಗೆ ಬಿದ್ದ ಚಂದ್ರನ ತುಂಡನು
No comments:
Post a Comment