ಯುದ್ಧ ಮುಗಿದರೆ ನಿರಾಳ ಭಾವವೇ?
ಗೆದ್ದು ಬೀಗಿದವರ ರಕ್ಕಸತನಕ್ಕೆ
ಸೋತವರ ಹಾದಿಯಲ್ಲಿ ಹೆಪ್ಪುಗಟ್ಟಿದ ನೆತ್ತರು
ಯಾವ ಶವದ್ದು ಯಾವ ಬಣ್ಣ?
ಗುರುತಿಸಲು ಕೊಂದವನೇ ಬರಬೇಕು,
ಅವನೂ ಮುಂದೆಲ್ಲೋ ಸತ್ತು ಬಿದ್ದಿರಬೇಕು..
ಇದೇ ಸೋಲು ಅಥವ ಗೆಲುವು ಎಂದು
ಗೆರೆ ಹಾಕಿ ವಿಂಗಡಿಸಲಾಗದು
ಕೆಲವೆಡೆ ಗೆದ್ದವರೇ ಸೋತಿರಬಹುದು
ಸೋತವರೂ ಗೆದ್ದಿರಬಹುದು
ಬದುಕಿ ಉಳಿದವರ ಬಂದೂಕು
ಒಂದೂ ಗುಂಡನ್ನು ಹಾರಿಸಿರದಿರಬಹುದು
ಸತ್ತವರಲ್ಲಿ ಎಲ್ಲ ಗುಂಡುಗಳು
ಖಾಲಿಯಾಗಿರಬಹುದು
ಕಿಚ್ಚು ಹಚ್ಚಿದವರೇ
ಕೈ ಚಾಚಲು ಕಾಯಬೇಕೇ?
ಹಾಗೂ ಚಾಚಿದರೆ ನಂಬಬೇಕೆ?
ನಂಬಿದರೆ ಎಷ್ಟು ದೂರ?
ದೂರ ಸಾಗಿದರೆ ಲಾಭ ಯಾರಿಗೆ?
ಲಾಭದಲ್ಲಿ ಯಾರಿಗೆಷ್ಟು ಪಾಲು?
ಫ಼ಾರ್ಮುಲಾ ಹಾಕಿ
ನಕ್ಷೆ ಗೀಚುವುದು ಸುಲಭವಲ್ಲ
ಸೋತವರ ಮನೆಗಳ ನೋಡಿ
ಒಂದು ಹೊತ್ತಿನ ತುತ್ತಿನ ಕಷ್ಟವನ್ನು;
ಇನ್ನು ಗೆದ್ದೆವೆಂದುಕೊಂಡವರ ಕತೆ ಭಿನ್ನವಲ್ಲ
ಆ ದಿನದ ಮಟ್ಟಿಗೆ ಹಾರ-ತುರಾಯಿ
ಬೂಂದಿ ಮಿಠಾಯಿ, ಜೈ ಕಾರ
ತಮಟೆ ಏಟು, ಬ್ಯಾಂಡ್ ಸೆಟ್ಟು
ಮರು ದಿನ ಅದೇ ಬಂಜರು ನೆಲ
ಹಣೆಯ ಗೆರೆ, ನೇಗಿಲ ಪಾಡು..
ಕದನ ಮನುಷ್ಯತ್ವದ ಎದೆ ಇರಿದು
ಧ್ವಜ ಹಾರಿಸಿದಂತೆ
ವಿರಾಮ ಘೋಷಣೆಯಾಗಿ ಧ್ವಜ ಇಳಿಸಿದರೂ
ಆದ ಗಾಯಕ್ಕೆ ಮುಲಾಮಿಲ್ಲ;
ಯಾರೋ ಕೈ ಕುಲುಕುತ್ತಾರೆ
ಮತ್ತಿನ್ನಾರೋ ಮಣ್ಣು ಮುಕ್ಕುತ್ತಾರೆ
ಬಂದೂಕಿಗೆ ಯಾವ ದೇಶ ಭಕ್ತಿ?
ಎಲ್ಲೋ ರೂಪ ಪಡೆದು ಇನ್ನೆಲ್ಲೋ ಬಿಕರಿಯಾದವು
ನೊಂದವರ ಕಣ್ಣೀರ ಬೆಲೆಗೆ;
ಯಾವ ಗುಂಡಿನ ಮೇಲೆ ಯಾರ ಹೆಸರು?
ಸೂಟು ಹಾಕಿದವರು ನಿರ್ಧರಿಸುತ್ತಾರೆ
ಅಣು ಬಾಂಬಿನ ಟ್ರಿಗ್ಗರ್ ಮೇಲೆ ಬೊಟ್ಟಿಟ್ಟು
ಇತ್ತ ಸ್ಪೋಟಕ್ಕೆ ಸಿಕ್ಕಿ ಛಿದ್ರವಾದವರಲ್ಲಿ ಚಿಂತೆ
"ಕಾಗದ ತಲುಪಿತೋ ಇಲ್ವೋ"
"ಪಿಂಚಣಿ ಸಿಗುತ್ತೋ ಇಲ್ವೋ"...
No comments:
Post a Comment