Tuesday 26 July 2022

ಊರುಗೋಲು ಮಾತನಾಡುತ್ತಿದೆ

ಊರುಗೋಲು ಮಾತನಾಡುತ್ತಿದೆ

ತನ್ನ ಸಹಚರನ ಸ್ಪರ್ಶ ಬಯಸಿ
ಯಾರಿಗೂ ಕೇಳದ ದನಿಯಲ್ಲಿ
ಯಾರಾದರೂ ಸಂತೈಸಿಯಾರು 
ಎಂಬ ಹಪಹಪಿಯಲ್ಲಿ
ಸುತ್ತಿದ ಚೀಲದೊಳಗೆ ಬಿಮ್ಮನೆ

ಭಾರ ಹೆರೆಸಿದವ ಈಗ
ಭಾರವೇ ಇಲ್ಲದ ಆತ್ಮವಾಗಿದ್ದಾನೆ
ದೇವರೇ ಆಗಿಬಿಟ್ಟಿದ್ದಾನೆ
ಇನ್ನು ಅವನ ಪಳೆಯುಳಿಕೆಗಳು
ಬಯಸಿದವರಲ್ಲಿ ಹಂಚಿಕೆಯಾಗಿ
ಅವರವರ ಕಪಾಟಿನಲ್ಲಿ ಭದ್ರವಾಗಿವೆ
ಈ ಊರುಗೋಲೊಂದನ್ನು ಬಿಟ್ಟು

ಯಾರ ಭುಜಗಳೂ ಸದ್ಯಕ್ಕೆ
ಕುಸಿದು ಬಾಗಿದಂತೆ ಕಂಡಿಲ್ಲ
ಆತ ಯಾರ ಮೇಲೂ ಹೊರೆಯಾಗಿಸಿಲ್ಲ;
ಬಾಯಿ ಬಿಟ್ಟ ಹಿಮ್ಮಡಿ
ಚಪ್ಪಲಿಯನ್ನು ತಿಂದಷ್ಟು 
ನೆಲವೂ ಸವೆಸಿರಲಿಲ್ಲ
ಇಟ್ಟ ಹೆಜ್ಜೆ ತೂಕವಾಗಿರುತ್ತಿತ್ತಲ್ಲದೆ
ಎಲ್ಲೂ ಹುಗುರಾದವನಲ್ಲ

ಸದಾ ಎಲ್ಲರನ್ನೂ ಬೆನ್ನಿಗೆ ಕಟ್ಟಿಕೊಂಡು
ದಾರಿಯಾಗುತ್ತಿದ್ದವನ ದಾರಿಗೆ
ಬುಡ್ಡಿ ದೀಪದ ಬೆಳಕಾಗಿ
ಜಾಗರೂಕತೆಯಿಂದ ನಡೆಸಿ
ಮುದಾಳತ್ವ ವಹಿಸಿಕೊಂಡ ಕೋಲು
ಕರ್ತವ್ಯ ನಿರ್ವಹಿಸುವಾಗ
ಹೊಟ್ಟೆ ಕಿಚ್ಚು ಪಟ್ಟಿದ್ದೆ.. 

ಹಿಡಿಯ ಭಾಗಕ್ಕೆ 
ಕುಸುರಿ ಮಾಡಿಸಿ ಇಡೋಣ,
ನಾಜೂಕು ನೆಲದ ಮೇಲೆ 
ಕೋಲಿನ ಅಂಗಾಲು ಜಾರದಂತೆ 
ರಬ್ಬರ್ ತುಂಡು ಜಡಿಯೋಣ,
ಮಕ್ಕಳೆಲ್ಲರ ಹೆಸರು ಕೆತ್ತಿಸಿ 
ತಾತನಿಗೆ ಉಡುಗೊರೆಯಾಗಿ ಕೊಡೋಣ;
ಇದು ನೆನ್ನೆ ಬಿದ್ದ ಕನಸು, ಎಂದಿನಂತೆ.. 

ಊರುಗೋಲು ಸೋಲೊಪ್ಪುವುದಿಲ್ಲ 
ತನ್ನ ಯಾತ್ರೆ ಎಷ್ಟೇ ಸಾಗಿದರೂ 
ತೃಪ್ತಿಯಂತೂ ಸಿಗುವುದೇ ಇಲ್ಲ 
ಇಂದು ಬೇಡವಾದದ್ದು ನಾಳೆ 
ನಮ್ಮಲ್ಲೇ ಯಾರಿಗಾದರೂ ಬೇಕಾಗಬಹುದು 
ಸವೆದ ಮಂಡಿಯ ಚಿಪ್ಪಿಗೆ 
ಜೊತೆಗಾರನೊಬ್ಬ ಬೇಕಿರುತ್ತಾನೆ 
ಬಂದೇ ಬರುವುದು ಕಾಲ
ಹುಡುಕಿಕೊಂಡು ಕೋಲ...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...