Tuesday, 26 July 2022

ಅಮ್ಮ ಭಯವಾಗಿದೆ

ಅಮ್ಮ ಭಯವಾಗಿದೆ 

ನೀನು ಜೊತೆಯಿಲ್ಲದೆ 
ಗುಮ್ಮ ಎದುರಾಗಿದೆ 
ನಿನ್ನ ಕತೆ ಕೇಳದೆ
ಅಮ್ಮ ನಿನ್ನ ಬೆರಳು
ಹಿಡಿಯದ ಹೊರತು ಬೀಳುವೆ  
ಅಮ್ಮ ನಿನ್ನ ಮೊಗವ 
ಕಾಣದ ಹೊರತು ಸೋಲುವೆ 

ಉರುಳೋ ಕಂಬನಿಯಲ್ಲಿ
ಕೆನ್ನೆ ನೆನೆದಂತಿದೆ 
ನಿನ್ನ ಹಸ್ತದ ಸವಿಯ
ತಾನು ಬಯಸಿದೆ
ಸಣ್ಣ ತಪ್ಪಿಗೂ ಕೂಡ
ತಪ್ಪದೆ ದಂಡನೆಯ
ನೀಡಿ ಮುತ್ತನು ಕೊಟ್ಟ
ನೆನಪು ಹಸಿರಾಗಿದೆ
ಯಾವ ಋಣವೋ ಆದೆ ಸಂಗಾತಿ
ನನ್ನ ಬಾಳಲಿ
ಅದೆಷ್ಟು ಹಿತವೋ ನಿನ್ನ ದನಿಯು
ಹಾಡಲು ಜೋ ಲಾಲಿ
ನಿನ್ನ ಮಡಿಲೇ ನನ್ನ ಜೋಕಾಲಿ

ಅಮ್ಮ ಕರೆ ಆಲಿಸು
ಒಮ್ಮೆ ಮಗುವಾಗಿಸು
ನನ್ಮ ಈ ಬಾಳನು 
ನೀನೇ ಸಂಬಾಳಿಸು


ಇಳೆಯ ಸೋಕುವ ಹನಿಯು
ಮತ್ತೆ ಮುಗಿಲಾಗಿದೆ
ಬಾನ ವಿಸ್ತಾರ ಕಂಡು
ಮತ್ತೆ ಮಳೆಯಾಗಿದೆ
ಬೇರು ನೀಡಿದೆ ಗುಟುಕು
ಹೂವು ಅರಳೋಕಿದೆ
ಉದುರೋ ಎಲೆಗಳು ಎಲ್ಲ
ಬೇರಿಗೆ ಮುಡುಪಾಗಿದೆ
ಪ್ರೀತಿ ಬೀರುವ ಕನ್ನಡಿ ನೀನು
ನನ್ನ ಬಿಂಬವೇ
ಎದುರುಗೊಳುವ ಖುಷಿಯ ಸಾಲು
ಎಲ್ಲ ನಿನ್ನವೇ
ನನ್ನ ದೇವತೆ ನೀನಲ್ಲವೇ...

ಅಮ್ಮ ನಿನಗೂ ಸಹ
ಹೀಗೇ ಅನಿಸಲ್ಲವೇ?
ನಮ್ಮ ಬಾಂಧವ್ಯವು
ಇನ್ನೂ ಬಿಗಿಯಾಗಿದೆ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...