Tuesday, 26 July 2022

ಬೆಳಕಿಲ್ಲದ ಮನೆಯ ಗೋಡೆಯ ಮೇಲೆ

ಬೆಳಕಿಲ್ಲದ ಮನೆಯ ಗೋಡೆಯ ಮೇಲೆ

ಒಂದು ಕಿಟಕಿಯ ಚಿತ್ರ ಬಿಡಿಸಿದೆ
ಕಿರಣಗಳು ನನ್ನ ಸೀಳುವಂತೆ ಹರಿದವು

ಚಾವಣಿಯ ಮೇಲೆ ಮೋಡಗಳ ಇಟ್ಟೆ
ಒಂದಕ್ಕೊಂದು ಘರ್ಷಿಸಿ ಸಿಡಿಲಬ್ಬರದಿ
ಭೋರ್ಗರೆದು ಬಂದು ನನ್ನ ತೋಯಿಸಿತು

ಒಂಟಿತನ ದೂರಾಗಿಸಲು ಹುಡುಗಿಯ ಬರೆದೆ
ಕೊಡಲೆಂದು ಉತ್ಪಲ ಬಳಿದೆ
ಇನ್ನಷ್ಟು ಅಂದವಾಗಿ ತಿದ್ದಬಹುದಿತ್ತೆಂದು
ತಗಾದೆಯಲ್ಲೇ ತೆಕ್ಕೆಗೆ ಜಾರಿದಳು

ಬಾಗಿಲ ಬರೆದು ಅದಕ್ಕೆ ಚಿಲಕವನ್ನೂ ಇಟ್ಟೆ
ಹೊರಗಿಂದ ಒಂದೇ ಸಮನೆ ತಟ್ಟಿದ ಸದ್ದು
ಮೌನ ಹೆದರಿ ಎದೆಯೊಳಗೆ ಅಡಗಿಕೊಂಡಿತು

ನನ್ನಷ್ಟಕ್ಕೆ ನಾನು ಇರಬಯಸಿದಾಗ
ಬೆಳಕು ನೆರಳಾಗಿ ಹಿಂಬಾಲಿಸಿತ್ತು
ಮೋಡ ಸಲುಗೆಯಿಂದ ನೆತ್ತಿ ಏರಿ ಕುಣಿಯಿತು

ಇನ್ನು ನನ್ನ ಹುಡುಗಿ
ಪ್ರಮಾದಗಳ ಬಗ್ಗೆ ಎಚ್ಚರಿಸುತ್ತ
ಬಾಗಿಲ ಬಡಿದವರ ಜೊತೆ ಸೇರಿಸಿಕೊಳ್ಳುವಂತೆಯೂ
ಸೈನ್ಯ ಕಟ್ಟಿ ಯುದ್ಧ ಸಾರುವಂತೆಯೂ ಪೀಡಿಸಿದಳು

ಬಣ್ಣದ ಚಿತ್ರಗಳ ಸುಣ್ಣದ ನೀರಲ್ಲಿ ಶುಭ್ರವಾಗಿಸಿ
ಆವರಿಸಿದ ಕತ್ತಲಲ್ಲಿ ಮತ್ತೆ ಪುನರ್ಜೀವ ಪಡೆದೆ
ಧ್ಯಾನಕ್ಕೆ ಕುಳಿತು ಮತ್ತೂ ಆಳಕ್ಕೆ ತಲುಪಿದೆ...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...