Tuesday 26 July 2022

ಕಾಮನ ಬಿಲ್ಲು

ಕಾಮನ ಬಿಲ್ಲು

ಗೀಚಿದೆ ಕವನ
ಭೂಮಿಯು ಓದುತ ನಲಿಯಲು
ಮೋಡವು ಕರಗಿ
ಜಾರಿದೆ ಇಳೆಗೆ
ಹೂಗಳ ಆಸೆಯ ತಣಿಸಲು
ಯಾವುದೋ ಹಾಡನು
ಹೆಕ್ಕುತ ಮೆಲ್ಲುತ
ಹಾಡಿದೆ ಹಕ್ಕಿಯು ಭರದಲಿ  
ಎಲ್ಲಿಗೋ ಸಾಗುವ 
ದಾರಿಯ ಹಿಡಿಯುತ 
ನಂಬಿಕೆ ಮೂಡಿದೆ ಮನದಲಿ 

ಬಣ್ಣದ ಸಾಲವ
ನೀಡುವ ಚಿಟ್ಟೆಯೇ 
ತಿರುಗಿ ನಾ ನಿನಗೆ ಏನ ನೀಡಲಿ?
ಅರಿವಿನ ಪಾಠವ
ಮಾಡುವ ನದಿಗಳೇ
ಕಲಿಸುವ ಗುರುಗಳು ನೀವೆನ್ನಲೇ  
ದೋಣಿಯ ಮಾಡಲು 
ಕಾಗದ ಸಾಲದೇ 
ಬಿಡಿಸಲೇ ಎಲೆಗಳೇ ನಿಮ್ಮನ್ನು  
ಏಣಿಯ ಹಾಕಿಯೂ 
ದೂರವೇ ನಿಲ್ಲುವ
ಆದರೂ ಗೆಳೆಯನೇ ಚಂದ್ರನು 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...