ಕಂದ
ಬೆನ್ನಿಗಂಟಿದ ಅಪ್ಪನ ಬೆರಳಚ್ಚು
ಕ್ಷಮೆ ಕೋರಿದೆ ನೋಡು
ಹೆಮ್ಮರದ ಅಡಿಯಲ್ಲಿ
ಗೋಲಿ ಆಟದ ವೇಳೆ
ಪೆಟ್ಟು ಬಿದ್ದರೆ ಹಾಗೆ ಒದರಬಾರದಿತ್ತು
ನಿನ್ನ ಕಣ್ಣಲಿ ಬಿದ್ದ
ನನ್ನ ಅಂಶದ ಧೂಳು
ಹೃದಯವ ಅಷ್ಟಾಗಿ ತೋಯಿಸಬಾರದಿತ್ತು
ಅಷ್ಟಕ್ಕೂ ನಿನ್ನ ಕೋಪ
ನಿನ್ನ ಹಠ, ತಗಾದೆಗಳೆಲ್ಲೆ
ನನ್ನ ಪಡಿನೆರಳು;
ಎಲ್ಲ ಮುಗಿದ ಮೇಲೆ
ಏನೂ ಆಗದ ಹಾಗೆ ಎದೆಗಪ್ಪುವೆ
ಹಾಗೆ ನನ್ನಿಂದಾಗುವುದಾ ಹೇಳು?!
ನಿದ್ದೆಯಲಿ ಹೊರಳಿ
ಮುದ್ದು ಹಸ್ತವ ಕೆನ್ನೆಗಿಟ್ಟು
ಬಿದ್ದ ಕನಸಿನ ಲೆಕ್ಕ
ನೀಡುವಂತಿದ್ದವು ನಿನ್ನ ಬೆರಳು,
ನಾ ಲೆಕ್ಕ ಹಾಕುತ್ತಲೇ ತಪ್ಪುತ್ತಾ ಹೋದೆ
ನೀ ನನ್ನವ ಎನ್ನುವ ಅಮಲು
ನಿಧಾನಕೆ ಇಳಿಯುತ್ತಿದ್ದಂತೆ
ಲೋಕ ನಿನ್ನನ್ನು ನೀನಿರುವಂತೆ
ಎಷ್ಟು ಮುಗ್ಧವಾಗಿ ಸ್ವೀಕರಿಸಿದೆ
ಎಂಬುದು ಅರಿವಾಯ್ತು ನೋಡು;
ನೀ ನಿನಗಾಗಿ ಮಾತ್ರ ಬದುಕು
ನಿನ್ನೊಳಗೆ ಸರ್ವಸ್ವವೂ ಅಡಗಿದಂತೆ
ದೇವರಲ್ಲದೆ ಮತ್ತೇನು ನೀನು
ಹೆಗಲೇರಿ ಕುಣಿಯುತ್ತ
ನನ್ನನ್ನೂ ಕುಣಿಸುವೆ
ಸೋಜಿಗವೆಂಬಂತೆ
ನೋಡು ನೋಡುತಲೇ ಶಿಖರದ
ತುತ್ತ ತುದಿ ಜಯಿಸಿ
ಮತ್ತೆ ಎರಗಿ ಬಂದು ಮಡಿಲ ಮಗುವಾಗುವೆ
ನೋಡು
ನನ್ನ ಬೆನಿಗೂ ಬಿಗಿದುಕೊಂಡೆ
ಅಲ್ಲಿಗೆ ಎಲ್ಲ ಮಾಫಿಯಾಗಲಿಲ್ಲ
ನಿನ್ನ ಪೆಟ್ಟು
No comments:
Post a Comment