ಸುಪ್ತವಾದಾಗ ನೀ ನನ್ನ ಮನದನ್ನೆಯೇ
ಎಲ್ಲೇ ಹುಡುಕಾಡಲಿ ಕಾಣುವೆ ನಿನ್ನನೇ
ಎಲ್ಲ ಸುಳ್ಳೆಂಬ ಅನುಮಾನವು ಸಹಜವೇ
ಸೀಳುತ ಎದೆಯನು ತೋರುವೆ ನಿನ್ನನೇ
ನಂಟು ಬೆಸೆವಾಗ ನೀ ನಾಚಿ ಕೆಂಪಾಗುವೆ
ನೋಡು ಗೋಧೂಳಿಯ ಬಣ್ಣಕೆ ಹೋಲಿಕೆ
ಯಾವ ಹೂವಾದರೂ ನಿನಗೆ ಶರಣಾಗಿದೆ
ಉದುರೋ ಎಲೆಯಾದರೂ ಬೇಡಿದೆ ನಿನ್ನನೇ
ತಂತಿ ಹಿಗ್ಗುತ್ತಾ ಬಿಗಿಯಾಗಿದೆ ನೋಡಿದೋ
ಮೀಟತಾ ಹೊರಟರೆ ಈಗ ನಿನ್ನಿಷ್ಟಕೆ
ಯಾವ ಸ್ವರವಾದರೂ ಕೂರದೇ ಶ್ರುತಿಯಲಿ
ಹಾಡು ಹೊಸೆವಾಟಕೆ ಕೂಗಿವೆ ನಿನ್ನನೇ
ನಲ್ಲೆ ನಡುದಾರಿಯ ಬಿಟ್ಟು ಸರಿದಾಗ ನೀ
ದಾರಿಯು ಅಲ್ಲಿಗೇ ಕೊನೆ ಆದಂತಿದೆ
ಮುಂದೆ ನೆಟ್ಟಂಥ ಮೈಲಿಗಲ್ಲುಗಳೆಲ್ಲವೂ
ಗುರುತಿಗೆ ಎದುರು ನೋಡುತ್ತಿವೆ ನಿನ್ನನೇ
ಹಬ್ಬವು ಹಬ್ಬವೇ ನೀನು ಇರದಿದ್ದರೆ
ಬೆಲ್ಲದ ಹೂರಣ ಕೂಡ ಕಹಿಯಾಗಿದೆ
ಬಾಡಿದ ತೋರಣ ಹೊತ್ತ ಮನ ಬಾಗಿಲು
ಇಟ್ಟ ರಂಗೋಲಿಯೂ ಬಿಡಿಸಿದೆ ನಿನ್ನನೇ
ಬಂಧಿಖಾನೆಯಲಿ ಹೆಚ್ಚು ಖುಷಿ ಪಟ್ಟವ
ಬಿಡುಗಡೆ ಹೊಂದಲು ಏಕೋ ಭಯವಾಗಿದೆ
ಮಾಡದ ತಪ್ಪಿಗೆ ಶಿಕ್ಷೆಯ ನೀಡು ನೀ
ನಾನೇ ಶರಣಾಗುವೆ ಬಾಚುತ ನಿನ್ನನೇ
No comments:
Post a Comment