Tuesday, 26 July 2022

ಚಂದಿರನ ಮೊಗದಲಿ ಯಾಕಿಷ್ಟು ಕಲೆಗಳಿವೆ

ಚಂದಿರನ ಮೊಗದಲಿ ಯಾಕಿಷ್ಟು ಕಲೆಗಳಿವೆ 

ಕಡಲಿನ ಒಡಲಲಿ ಇನ್ನೆಷ್ಟು ಅಲೆಗಳಿವೆ 
ನನ್ನೊಳಗೂ, ನಿನ್ನೊಳಗೂ 
ಪ್ರಶ್ನೆಗಳ ಸುರಿಮಳೆಯು 
ಇಂದೇಕೋ ಮಿತಿ ಮೀರುತಿದೆ 
ಕಂಬನಿ ಕೋಡಿ ಒಡೆಯುತಿದೆ 
ನೀ ಬರಲೆಂದೇ, ನಾ ಕಾದಿರುವೆ 
ಇಬ್ಬನಿಯಂತೆ... 

ಕಾರಿರುಳು ಆವರಿಸಿ
ಬದುಕಿನ ಪಾಠವ ಮಾಡುತಿದೆ
ಮುಳ್ಳುಗಳ ದಾರಿಗಳೇ
ಪಯಣದ ದಿಕ್ಕನು ತೋರುತಿದೆ
ಯಾರಿರದ ಊರಿನಲಿ
ಸೂರಿರದೆ ತಂಗಿರುವೆ
ಮೂಡುವ ನೆನಪಿನ ಹಂಗಿನಲಿ
ಕೇವಲ ನಿನ್ನದೇ ಗುಂಗಿನಲಿ
ನೀ ಬರಲೆಂದೇ, ನಾ ಕಾದಿರುವೆ 
ಉಂಗುರದಂತೆ...

ನಿಂತಿರುವ ಕಾಲವಿದು
ಮುಂದಕೆ ಚಲಿಸಲು ಸೋಲುತಿದೆ
ಯಾವುದನೂ ನಂಬದೆಲೆ
ಆಸೆಗಳೆಲ್ಲವೂ ಸಾಯುತಿವೆ
ಆಲಿಸುವ ಮನಸಿದ್ದೂ
ಕೇಳಿಸದೇ ಪಿಸು ಮಾತು
ಅಲೆಯುವೆ ಧ್ಯಾನಿಸಿ ನೆನ್ನೆಯನೇ
ತಡೆದು ನಿಲ್ಲಿಸು ಕಂಡೊಡನೆ
ನೀ ಬರಲೆಂದೇ, ನಾ ಕಾದಿರುವೆ 
ಅಂಬರದಂತೆ..

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...