Monday, 24 November 2025

ಹೃದಯವ ನೀಡಲೇ

ಹೃದಯವ ನೀಡಲೇ

ಹೇಳದ ಮಾತಿವೆ ನೂರಾರು
ಆಲಿಸು ಈಗಲೇ
ಪಾಲಿಸಿ ನಿನ್ನಯ ನೆರಳನು
ಹೃದಯವ ನೀಡಲೇ
ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ 
ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ 
ಹೇಳದ ಮಾತಿವೆ ನೂರಾರು
ಆಲಿಸು ಈಗಲೇ
ಪಾಲಿಸಿ ನಿನ್ನಯ ನೆರಳನು
ಹೃದಯವ ನೀಡಲೇ...

ಈ ಪ್ರೀತಿಯಾಗೋ ವೇಳೆಯಲ್ಲಿ ಹೀಗೇನಾ?
ಹೀಗಾಗಲು ಈ ಪ್ರೀತಿಯೊಂದೇ ಕಾರಣ 
ನೂರಾರು ಭಾವ ಹೊಮ್ಮಿ ಬಂತು ನೂತನ
ನೀ ಮುಂದುವರಿಸು, ನಿನ್ನ ಎದುರು ಮೌನಿ ನಾ
ನೀಡುವೆ ಮುಂಗಡ ಈ ಸಾಲು 
ಸಾಲಿಗೆ ನನ್ನದು ಪ್ರತಿ ಸಾಲು 
ಸಾಗಲಿ ಕೊನೆಯನೇ, ಕಾಣದಿರೋ 
ರಾಜಿಯಾಗದ ಹಾಡು..

ಒಲವಲ್ಲಿ ನಾನಿನ್ನೂ ಬಲವಾಗಿ ಬೇರೂರಿದೆ

ಒಲವಲ್ಲಿ ನಾನಿನ್ನೂ ಬಲವಾಗಿ ಬೇರೂರಿದೆ

ಒಳಗೊಳಗೇ ಖುಷಿಯಲ್ಲಿ ಈ ಜೀವ ಕುಣಿದಾಡಿದೆ
ಸುಂದರವಾದ ಕನಸಿನ ಚೂರು
ಕಣ್ಣಲೇ ಉಳಿದು ಕಾಣಿಸರಾರೂ
ಒಲವಲ್ಲಿ ನಾನಿನ್ನೂ ಬಲವಾಗಿ ಬೇರೂರಿದೆ...

ಹೇಗೋ ಬದುಕು ಸಾಗಿರುವಾಗ
ಅಲ್ಪ ವಿರಾಮ ನೀಡೋ ಸಮಯ
ನಿಂತು ನಿನ್ನ ನೋಡುವ ವೇಳೆ
ಎಲ್ಲವೂ ಚಂದ ಅನಿಸುವ ವಿಷಯ
ಹೇಳಿ ಕೇಳಿ ಬರೋದಲ್ಲ ಈ ಸ್ವರ 
ಹೇಳಿ ಕೇಳಿ ಬರೋದಲ್ಲ ಈ ಜ್ವರ

ಒಲವೇ...
ಒಲವಲ್ಲಿ ನಾನೀಗ ನಾನಾರೋ ಅರಿತಾಗಿದೆ
ಒಳಗೊಳಗೇ ಖುಷಿಯಲ್ಲಿ ಈ ಜೀವ ಕುಣಿದಾಡಿದೆ

ಚೌಕ ಹಾಕಿ ಆಡೋದಲ್ಲ
ಗಡಿಯ ಮೀರೋ ಪ್ರೀತಿ ನನದು
ಕಟ್ಟುಪಾಡು ಯಾವುದೂ ಇಲ್ಲ
ಅನಿಸೋ ಹಾಗೆ ಪ್ರೀತಿಸಬಹುದು
ಕೊನೆಗೆ ಗೆಲ್ಲೋದು ನಾವಾದರೂ ಸಹ
ಎಷ್ಟೋ ಸೋಲನ್ನು ದಾಟಿ ಬರಬೇಕು..

ಒಲವಲ್ಲಿ ನಾನಿನ್ನೂ ಬಲವಾಗಿ ಬೇರೂರಿದೆ
ಒಳಗೊಳಗೇ ಖುಷಿಯಲ್ಲಿ ಈ ಜೀವ ಕುಣಿದಾಡಿದೆ
ಸುಂದರವಾದ ಕನಸಿನ ಚೂರು
ಕಣ್ಣಲೇ ಉಳಿದು ಕಾಣಿಸರಾರೂ

ಒಲವೇ... ಒಲವೇ...

ಚಳಿಗೆ ನಡುಗುತಿರಲು ಧರೆ


ಚಳಿಗೆ ನಡುಗುತಿರಲು ಧರೆ

ಶಾಲು ಹೊಡಿಸಿ ಹೋದವನು
ಲಾಂದ್ರ ಹಿಡಿದು ಹೊದಿಕೆ ಸರಿಸಿ
ಕಾವು ಕೊಡಲು ಬಂದನು
ಕುಂಕುಮದ ನೀರು ಚಿಮುಕಿ
ಆಕಾಶಕೆ ಕೆಂಬಾರ
ಬೆಟ್ಟ ಸಾಲು, ಬೆಳಕ ಬೀಳು
ಕ್ಷಿತಿಜದಲ್ಲಿ ಮಂದಾರ!!


ಮೊದಲೇ ಸಿಗಬಾರದೇ?

ಮೊದಲೇ ಸಿಗಬಾರದೇ?

ಹೃದಯ ಕಾದಿರಿಸಿರುವೆ ನೋಡು 
ಸ್ವೀಕರಿಸಬಾರದೆ?
ಬದುಕಿನ ಬಂಧನ ಬಿಡಿಸಲು 
ಮೊದಲೇ ಸಿಗಬಾರದೇ?
ಹಾತೊರೆದ ಹಂಬಲಕೆ 
ಭರವಸೆಯ ನೀಡಿದೆ ನೀ 
ಆಲಿಸೆಯಾ ಎದೆಗೊರಗಿ 
ಉಲಿದಿರಲು ಒಲವ ದನಿ 

ನೀರಾಗಿ ಎರಗಿ ನಿನ್ನ ಪಾದ ಸೋಕಲೇ?
ಹೂವಾಗಿ ಅರಳಿ ನಿನ್ನ ಜೊತೆಗೆ ಹರಿಯಲೇ?
ಜೋರಾಗಿ ಒಮ್ಮೆ ನಿನ್ನ ಹೆಸರ ಕೂಗಲೇ?
ನೀ ಕೂಗೋ ಮೊದಲೇ ಹಾಜರಾತಿ ನೀಡಲೇ?
ಹೇಳುವೆ ಆಸೆಯನು ತಾಳು 
ಯಾರಿಗೂ ಕೇಳಿಸದೆ ಹೇಳು 
ಆತ್ಮಕೆ ರಸವಶ, ಆ ಅನುಭವ 
ಆವರಿಸಲಿ ಹೀಗೆ…
(ಮೂಡಲಿ ನವರಸ, ಆ ರಸವಶ 
ಆವರಿಸಲಿ ಹೀಗೇ…)

ಬೆಟ್ಟದ ಆ ತುತ್ತ ತುದಿಯ






ಬೆಟ್ಟದ ಆ ತುತ್ತ ತುದಿಯ
ಸತ್ತ ಮರದ ಕೊಂಬೆ ಮೇಲೆ
ಪರಾವಲಂಬಿ ಬಳ್ಳಿಯೊಂದು
ಬೇರು ಹಬ್ಬಿ, ಮೈಯ್ಯ ಮುರಿದು
ಮುಗಿಲಿನತ್ತ ಮೊಗವನೊಡ್ಡಿ
ಗಾಳಿಯಿತ್ತ ತುತ್ತ ಹಿಡಿದು 
ನಾಲ್ಕಾರು ಹೂವು ಪುಟಿದು
ಚಂದವಾಗಿ ಅರಳಿತು

ಅಷ್ಟೆತ್ತರ ಹಾರಬಲ್ಲ
ಆಗಷ್ಟೇ ಗೂಡು ತೊರೆದ
ಚಿಟ್ಟೆ ರೆಕ್ಕೆ ಪಾಲು ಪಡೆದು
ತೊಟ್ಟು ಜೇನ ಅದಕೆ ಎರೆದು
ಬಣ್ಣ ತಾಳಿದ ಹೂವು, ಅದಕೆ
ನೆರವುಕೊಟ್ಟ ಮರದ ಹೆಣಕೆ
ಸಿಂಗಾರದ ಹೊದಿಕೆಯಾಗಿ 
ಗಂಧ ಗಾಳಿಗೆ ನೀಡಿತು

ಎಷ್ಟೇ ಆರದೂ ಜೀವ ತಾನೆ?
ಅದಕೂ ಉಂಟು ಆಸೆ-ಬೇನೆ
ಮನಗಳ ಕೆರಳಿಸುವ “ಹೂ”
ಬಯಸುವುದು ಪರಾಗ ಸ್ಪರ್ಶ
ನಾನಾ ಬಣ್ಣ ಬೆಸೆದುಕೊಂಡು
ಹೊಸತನಕೆ ಮೋಹಗೊಂಡು 
ಬೆಟ್ಟ ಸಾಲಿನ ಸುತ್ತ-ಮುತ್ತಲ
ಇರುವಿಕೆಯ ದಾಖಲಿಸಿತು

ಕುಂಚ ಹೆಣೆದ ಬಲೆಗೆ ಸೋತೋ
ಅಚ್ಚ ಕನ್ನಡ ಪದಕೆ ಜೋತೋ
ಬಂದು ಹೋದವರನ್ನು ತನ್ನೆಡೆ
ಕೈ ಬೀಸಿ ಕರೆದ ಹೂವು
ದಕ್ಕಿಸಿಕೊಂಡವರಿಗಿನ್ನು 
ಪೊರೆವ ಆವುದೇ ಹೊರೆಯಗೊಡದೆ
ಎಟುಕುವೆಲ್ಲೆಡೆ ಕಣ್ಣ ಮಿಟುಕಿಸಿ
ತನ್ನ ತಾ ತೋರ್ಪಡಿಸಿತು

ಕತೆಯು ಹೀಗೆ ಮುಂದುವರಿದು
ಮಾನವರಲಿ ಈರ್ಷೆ ಬೆಳೆದು
ಬಳ್ಳಿ ಕರುಳಿನ ಬಂಧ ಮುರಿದು
ದೂರದೂರಿಗೆ ಹೊತ್ತು ಮೆರೆದು 
ತನ್ನದಲ್ಲದ ಅಂಗಳದಲಿ 
ಬಾಲ್ಕನಿಯ ಸರಹದ್ದಿನಲ್ಲಿ
ಒಲ್ಲದ ಆರೈಕೆ ನಡುವೆ

ಅಲ್ಲೂ ನಗುವನೇ ಚೆಲ್ಲಿತು!



ಹೌದಾ ಹೀಗೇನಾ?

 ಹೌದಾ ಹೀಗೇನಾ?

ಒಲವಲ್ಲಿ ಹೀಗೇನಾ?
ಮೊದಲಾದ ಕ್ಷಣದಲ್ಲೇ
ನಿನ್ನವನೇ ಆದೆ ನಾ
ಹೌದಾ ಹೀಗೇನಾ?
ಒಲವಲ್ಲಿ ಹೀಗೇನಾ?
ಪ್ರತಿಯೊಂದು ಉಸಿರಲ್ಲೂ
ತುಂಬಿರುವೆ ನಿನ್ನನ್ನ
ಒಂದಾಗೋಣ
ಬಾ ಇನ್ನ
ನಮ್ಮನ್ನ
ಈ ದಿನ
ಹೆಳಲಿಕೆ, ಕೇಳಲಿಕೆ
ಯಾರಿಹರು?

ಹಿಂದೆಂದೂ ಕಾಣದ ಉನ್ಮಾದ
ಇನ್ನೂ ನೀ ಹತ್ತಿರ ಬರಲು
ಏನೇನೂ ಹೇಳದೆ ಸೋತಂತೆ
ಇನ್ನೂ ನೀ ಹತ್ತಿರ ಬರಲು
ಮುಂದಕ್ಕೆ ಹೋಗುವ ಮಾತಿಲ್ಲ
ಇನ್ನೂ ನೀ ಹತ್ತಿರ ಬರಲು
ನಿಂತಲ್ಲೇ ನಿಂತಿದೆ ಗಡಿಯಾರ
ಇನ್ನೂ ನೀ ಹತ್ತಿರ ಬರಲು

ಅರಳು ಮರಳು ಆಗೋ ವಯಸಲಿ
ಚಿಗುರು ಮಲ್ಲೆ ನಾ
ಬೆರಳು ಸೋಕಿ ಹೋದೆ ಮರೆಯಲಿ
ಅರಳಿ ಬಿಡಲೇ ನಾ
(ಏನೇನಾಗಬೇಕೋ ಆಗೇ ಬಿಡಲಿ ಅತ್ಲಾಗೆ
ಬೆರಗು ಮಾದರಿಯಷ್ಟೇ ಅಸಲಿ ವಿಷಯ ಹಿತ್ಲಾಗೆ)
ಏನೇನಾಗಬೇಕೋ ಆದಂತೆ ಸದ್ದೇ ಇರದೇ
ನನ್ನಾಸೆಯನ್ನೆಲ್ಲ ಹೇಳೋ ಮುನ್ನ ನೀ ತಿಳಿದೆ
ಮನಸು ಹೂಡೋ 
ಹಾಡಲ್ಲಿ
ನೀನೊಂದು 
ನಾನೊಂದು
ಸಾಲೊಳಗೆ
ಕೂರುತಲಿ
ಸಾಗುವ ಬಾ...
ಬಚ್ಚಿಟ್ಟು ನಾಚಿಕೊಂಡಿರುವೆ
ಇನ್ನೂ ನೀ ಹತ್ತಿರ ಬರಲು
ಎಚ್ಚೆತ್ತೂ ಕಳೆದು ಹೋಗಿರುವೆ
ಇನ್ನೂ ನೀ ಹತ್ತಿರ ಬರಲು



*******
ಬರುವ ಮುನ್ನ 
ನೀ ನನ್ನ
ಏನೆಂದು
ಕೇಳೋದು
ಶುರುವಿನಲೇ
ಕೊನೆಗೊಳಿಸೋ
ಕೌತುಕವೇ!

ಮುಂದೋಡುವ ಸಮಯ

ಮುಂದೋಡುವ ಸಮಯ

ಒಂದಾಗಿಸು ಒಲವ
ಮಿಂದಾಗಿರೋ ಮನವು
ಏನೆಂದಿದೆ ಕೇಳೊಮ್ಮೆ ನೀ
ಕಣ್ಣಾಗುವೆ ಕನಸೇ
ಇನ್ನಾದರೂ ಸುಳಿದು
ದೂರಾಗಿಯೇ ಉಳಿದೆ
ಸಂತೈಸಲಿ ಬೇರಾರನು..

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...