ಹೇಳಬೇಕು ಸಖಿಯೇ
ನೀ ನನಗೆ ಏನು ಆಗಬೇಕು
ಏಕೆ ಇನ್ನೂ ಒಗಟು
ಕಾಯುವೆಕೆ ಹೇಗೆ ತಾಳಬೇಕು
ನೀಗುತಿದೆ ನನ್ನ ಮನದ ಹಸಿವು
ನೀ ನಗುವ ಬೀರಿ ನಡೆಯುತಿರಲು
ಓಡಿ ಬಂತು ಬಳಿಗೆ
ನಾಚಿಕೆಯು ಕಣ್ಣು ಕಣ್ಣಿಗಿಡಲು
ಓ ಒಲವೇ....
ಏಕತಾನತೆಯ ಬಾಳು ನೀನಿರಲು
ನೂರು ಬಣ್ಣಗಳ ತಾಳಿದೆ
ಹೀಗೇ ಜೊತೆಗಿರಲು ಮೂಕ ಹೃದಯವಿದು
ಹಾಡು ಹಾಡುವುದರಲ್ಲಿದೆ
ಏನಿಲ್ಲ ಅನ್ನುತ್ತ, ಏನೆಲ್ಲ ಆದಂತೆ
ಹೀಗೊಂದು ಅನುಬಂಧ ಶುರುವಾಗಿದೆ
ಒಂದಲ್ಲ ಎರಡಲ್ಲ, ಹತ್ತಾರು ಜನುಮಕ್ಕೂ
ಸಾಕಾಗುವ ಪ್ರೀತಿ ನಮದಾಗಿದೆ
ತಾಪಮಾನ ಬಿರುಸು
ಆದರೆ ನಾ ತಂಪು ಗಾಳಿ ಸವಿದೆ
ಹಾತೊರೆವೆ ಒಂದೇ ಒಂದು ಗಳಿಗೆ
ಕಾಣಿಸದೆ ಹೋಗುವಾಗ ಮನದೆ
ಓ ಒಲವೇ...
ಪಾಲು ಕೇಳುವೆನು, ಕಾಡೋ ಕನಸಿನಲಿ
ನೀಡಬೇಡ ನೀ ಸತಾಯಿಸು
ಹೇಳ ಬೇಕಿರುವ ಮಾತ ಹೇಳದೆಲೆ
ಹಾಗೇ ಮೌನದಲೇ ಕಾಡಿಸು
ಆನಂದ ಹೆಚ್ಚಾಗಿ ಕುಣಿದಾಡುವ ವೇಳೆ
ನೀ ಸಣ್ಣ ಮಳೆಯನ್ನು ಕರೆತಂದೆಯಾ
ಎಲ್ಲಕ್ಕೂ ಮಿಗಿಲಾದ ಮುಗಿಲಲ್ಲಿ ನನಗೊಂದು
ತೇಲಾಡುವ ಮನೆಯ ನೀ ಮಾಡೆಯಾ?
ನೇರವಾದ ಬಯಕೆ
ಪೀಠಿಕೆಯ ಹಾಕಿ ಸುತ್ತಿ ಬರುವೆ
ಹಾಳೆಗಳ ಗೀಚಿ ತಂದೆ ನಿನಗೆ
ಓದುವೆಯಾ ಒಂದೂ ಸಾಲೂ ಬಿಡದೆ
ಓ ಓಲವೇ...
No comments:
Post a Comment