
ಬೆಟ್ಟದ ಆ ತುತ್ತ ತುದಿಯ
ಸತ್ತ ಮರದ ಕೊಂಬೆ ಮೇಲೆ
ಪರಾವಲಂಬಿ ಬಳ್ಳಿಯೊಂದು
ಬೇರು ಹಬ್ಬಿ, ಮೈಯ್ಯ ಮುರಿದು
ಮುಗಿಲಿನತ್ತ ಮೊಗವನೊಡ್ಡಿ
ಗಾಳಿಯಿತ್ತ ತುತ್ತ ಹಿಡಿದು
ನಾಲ್ಕಾರು ಹೂವು ಪುಟಿದು
ಚಂದವಾಗಿ ಅರಳಿತು
ಅಲ್ಲೂ ನಗುವನೇ ಚೆಲ್ಲಿತು!
ಅಷ್ಟೆತ್ತರ ಹಾರಬಲ್ಲ
ಆಗಷ್ಟೇ ಗೂಡು ತೊರೆದ
ಚಿಟ್ಟೆ ರೆಕ್ಕೆ ಪಾಲು ಪಡೆದು
ತೊಟ್ಟು ಜೇನ ಅದಕೆ ಎರೆದು
ಬಣ್ಣ ತಾಳಿದ ಹೂವು, ಅದಕೆ
ನೆರವುಕೊಟ್ಟ ಮರದ ಹೆಣಕೆ
ಸಿಂಗಾರದ ಹೊದಿಕೆಯಾಗಿ
ಗಂಧ ಗಾಳಿಗೆ ನೀಡಿತು
ಎಷ್ಟೇ ಆರದೂ ಜೀವ ತಾನೆ?
ಅದಕೂ ಉಂಟು ಆಸೆ-ಬೇನೆ
ಮನಗಳ ಕೆರಳಿಸುವ “ಹೂ”
ಬಯಸುವುದು ಪರಾಗ ಸ್ಪರ್ಶ
ನಾನಾ ಬಣ್ಣ ಬೆಸೆದುಕೊಂಡು
ಹೊಸತನಕೆ ಮೋಹಗೊಂಡು
ಬೆಟ್ಟ ಸಾಲಿನ ಸುತ್ತ-ಮುತ್ತಲ
ಇರುವಿಕೆಯ ದಾಖಲಿಸಿತು
ಕುಂಚ ಹೆಣೆದ ಬಲೆಗೆ ಸೋತೋ
ಅಚ್ಚ ಕನ್ನಡ ಪದಕೆ ಜೋತೋ
ಬಂದು ಹೋದವರನ್ನು ತನ್ನೆಡೆ
ಕೈ ಬೀಸಿ ಕರೆದ ಹೂವು
ದಕ್ಕಿಸಿಕೊಂಡವರಿಗಿನ್ನು
ಪೊರೆವ ಆವುದೇ ಹೊರೆಯಗೊಡದೆ
ಎಟುಕುವೆಲ್ಲೆಡೆ ಕಣ್ಣ ಮಿಟುಕಿಸಿ
ತನ್ನ ತಾ ತೋರ್ಪಡಿಸಿತು
ಕತೆಯು ಹೀಗೆ ಮುಂದುವರಿದು
ಮಾನವರಲಿ ಈರ್ಷೆ ಬೆಳೆದು
ಬಳ್ಳಿ ಕರುಳಿನ ಬಂಧ ಮುರಿದು
ದೂರದೂರಿಗೆ ಹೊತ್ತು ಮೆರೆದು
ತನ್ನದಲ್ಲದ ಅಂಗಳದಲಿ
ಬಾಲ್ಕನಿಯ ಸರಹದ್ದಿನಲ್ಲಿ
ಒಲ್ಲದ ಆರೈಕೆ ನಡುವೆ
ಅಲ್ಲೂ ನಗುವನೇ ಚೆಲ್ಲಿತು!
No comments:
Post a Comment