Monday, 10 February 2014

ನದಿಗಡಲ ನಂಟು

ನದಿಗಡಲ ಸಂಗಮದಿ
ಸಣ್ಣ ರಿಂಗಣದ ಸುಳಿ 
ಸಿಹಿ ನೀರು ಉಪ್ಪಿಗೆ 
ಕಿವುಚಿತು ಮೋರೆ 
ನಾ ಕಡಲು ನೀ ನದಿ 
ತೊರೆ ತೊರೆಯ ಹೊತ್ತು ತಾ 
ಮಿಲನದ ಗಳಿಗೆಯಲಿ 
ನಿನ್ನ ಮೊಗ ತೋರೆ 
 
ಜಲಚರಗಳು ನನ್ನ 
ಎದೆಯನ್ನೇ ಸೀಳುತಿವೆ 
ನಿಶ್ಚಲ ಭಾವವ 
ಮನಸಾರೆ ಖಂಡಿಸಿ 
ನಿನ್ನೆದೆಯ ಅವುಗಳಿಗೂ 
ಅನಿಸಲಿಲ್ಲವೇ ಹೀಗೆ?
ಅಣೆಯ ಹಿಂದೆ ಉಳಿದೆ 
ಹಣೆಯ ಹುಣ್ಣಾಗಿಸಿ 
 
ನೋವಿನ ಪತ್ರವನು 
ತೀರಕ್ಕೆ ತಲುಪಿಸಲು 
ನೇಮಿಸಿದ ಅಲೆಗಳು 
ಬರೆದದ್ದ ಅಳಿಸಿವೆ 
ಮನ ನೊಂದು ದೂರಿದ 
ಚಂದಿರನ ಮಾತಿಗೆ 
ಇದ್ದಲ್ಲಿ ಇರಲಾರದೆ 
ಉರಿದು ಹಾರಿವೆ 
 
ನದಿ ಜಾಡನು ಹಿಡಿದು 
ಹಿನ್ನಡೆಯುವ ತವಕ 
ತಳದ ಕಪ್ಪೆಚಿಪ್ಪಿಗೇನ 
ಕೊಡಲುತ್ತರ?
ಎಂದೂ ಬೀರದ 
ರೌಧ್ರತೆಯ ಆಲಿಸಿ 
ಭೂಮಿಯೂ ಕ್ಷಣ ಕಾಲ 
ಆಗುವುದು ತತ್ತರ 
 
"ಕಟ್ಟೆಗಳ ಹೊಡೆದು ಬಾ 
ಗದ್ದೆಗಳ ಜರಿದು ಬಾ 
ನಿನ್ನ ಮಡಿಲ ಸೊಂಪು 
ನಿದ್ದೆಯನು ಒದರಿ ಬಾ"
ಅನಿಸಬಹುದೇ ಹೊರತು 
ಹೇಳಲು ಬಾಯಿಲ್ಲ 
ನದಿ ಅವಳು ಕಡಲಲ್ಲ 
ಹಸಿರ ಎದೆ ಕೌಸ್ತುಭ 
 
ನನ್ನ ಪೂರ್ಣತೆಗೆ 
ಅದೆಷ್ಟು ಹರಿದಳೋ ಕಾಣೆ 
ನನ್ಹಸಿವ ನೀಗಿಸಿ 
ಬೆವರಿತು ತನ್ಸೀರೆ 
ನನ್ನ ಪರಿಮಿತಿಗಳ 
ಸೀಮೆಯೊಳಗಿರಿಸಿದಳು
ಅಮಿತ ಪ್ರೇಮವ ಎರೆದ
ಮನದನ್ನೆ ನೀರೆ !!
 
                 -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...