Monday, 3 February 2014

ಒಂದಿಷ್ಟು ಆಸೆಗಳು !!

ನೀ ಕಂಡ ದಿನದಿಂದ 
ನಾ ಕಂಡ ಕನಸಲ್ಲಿ 
ನಿನಗೆಂದೇ ಪಾಲೊಂದ ಮೀಸಲಿಡುವಾಸೆ 
ಹಂಗಾಮಿ ಪ್ರೀತಿಯಲಿ 
ಬೇನಾಮಿ ಪತ್ರವನು 
ಬರೆದಿಟ್ಟು ಟ್ರಂಕಿನಲಿ ಬಚ್ಚಿಡುವ ಆಸೆ

ಸೆಲ್ವಾರಿನ ಬೆನ್ನ 
ಕರಕುಶಲ ವಿನ್ಯಾಸ 
ನೋಡುತ್ತಲೇ ಹಾಗೆ ಮೈ ಮರೆಯುವಾಸೆ 
ಕಂಡ ಅಂಗೈ ಅಗಲ 
ಬೆನ್ನ ಹಾಳೆ ಮೇಲೆ 
ಒಂದು ಹನಿಗವನವ ಗೀಚಿಬಿಡುವಾಸೆ 
 
ಗುಟ್ಟಾಗಿ ಸುಳ್ಳೊಂದ
ನಿನ್ನಿಂದ ಮುಚ್ಚಿಟ್ಟು 
ಬೇಕಂತಲೇ ಮತ್ತೆ ಸುಳ್ಳಾಡುವಾಸೆ 
ಸಿಟ್ಟಾಗಿ ನೀ ನನ್ನ 
ಜೊತೆಯನ್ನೇ ಜರಿದಾಗ 
ಪೆಟ್ಟಾದ ಮಗುವಂತೆ ಅತ್ತುಬಿಡುವಾಸೆ 
 
ಕಣ್ಣಲ್ಲಿ ಕಣ್ಣಿಟ್ಟು 
ನಾಳೆಗಳ ಸವಿದಾಗ 
ಜಿನುಗುವ ಕಣ್ಣೀರ ಮುದ್ದಿಸುವ ಆಸೆ 
ಒಂದಾಗಿ ಇರುಳಲ್ಲಿ 
ತಾರೆಗಳ ಎಣಿಸುತ್ತ 
ಆಗಾಗ ಚಂದಿರನ ಎಚ್ಚರಿಸುವಾಸೆ 

ಬಂಧಿಸಿ ರೇಖೆಯ
ಜೋಡಿಸಿ ಆಸೆಯ 
ಹೆಜ್ಜೆಗೂಡಿಸಿ ಹೆಜ್ಜೆ ಮುನ್ನಡೆಸುವಾಸೆ 
ಹೊಂದುತ ಹಾವಕೆ 
ಸ್ಪಂದಿಸಿ ಭಾವಕೆ 
ಜೀವಮಾನವ ಮೀರಿ ಹೆಸರಾಗುವಾಸೆ 

                                   -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...