Wednesday, 5 February 2014

ಅಲ್ಪನ ಆಕಳಿಕೆ !!

ನೆನ್ನೆಯಷ್ಟೇ ನಿನ್ನ 
ಎದೆಗೊತ್ತಿಕೊಂಡಿದ್ದೆ 
ಆಗಲೇ ನೀ ನನ್ನ 
ಕೆನ್ನೆ ಮೊಡವೆ 
ಮೌನದಲ್ಲೇ ನನ್ನ 
ನೀ ವರಿಸಿಕೊಂಡಿದ್ದೆ 
ಮಾತಿಗೆ ಸಿಕ್ಕರೆ 
ಲೋಕ ಮರೆವೆ 
 
ಕಾಡುವಷ್ಟರ ಮಟ್ಟ 
ತಲುಪುವವಳಾಗಿದ್ದೆ 
ನಾಚಿಕೆ ಬೀರುತ 
ಅಲ್ಪನೆಡೆಗೆ 
ಏದುಸಿರ ಏರಿಳಿತ 
ಕಾಪಾಡಿಕೊಂಡಿದ್ದೆ 
ಗಾಂಭೀರ್ಯ ಕುಂದಿತ್ತು 
ಚೂರು ಕಡೆಗೆ 
 
ಹಾಡು ಹಸೆ ಬಾರದವ 
ನನ್ನ ನಾ ಶಪಿಸಿದ್ದೆ 
ನಿನ್ನ ಅಭಿರುಚಿಗೆ
ತಕ್ಕವನಾಗದೆ 
ಕಲಿತದ್ದು, ಕದ್ದದ್ದು 
ಪುಡಿ ಅಕ್ಷರವ ಬೇಡಿ 
ಹೀಗೊಂದು ಬಾಲಿಶ 
ಪದ್ಯ ಬರೆದೆ 
 
ಮಾತೆಲ್ಲ ಅದುಮಿಟ್ಟು 
ಮೈ ನುಲಿಸಿ ನಿಂತಿದ್ದೆ 
ನೀನಾಗೇ ಮೀಟಿದೆ 
ಮೌನ ತಂತಿ 
ಹೂದೋಟದೊಳಗೊಂದೂ 
ಹೂ ಸಿಗದೆ ಹೋದಂತೆ 
ನಾಲಿಗೆ ತುದಿಯಲಿ 
ಏನೋ ಭೀತಿ 
 
ಮಾರ್ದನಿಗೆ ಕಾದಿರುವೆ 
ಇಳಿದನಿಯ ರಿಂಗಣಿಸಿ 
ನಿನ್ನೊಲುಮೆಯ ತಳದ 
ಕಪ್ಪು ನಾನು 
ಹೀಗಿದ್ದರೂ ಸಹಿತ 
ಹೇಗಾದರೂ ಸಹಿಸಿ 
ಈ ಬಡವನ ಮನವಿ 
ಒಪ್ಪು ನೀನು !!

             -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...