Thursday, 6 February 2014

ಆದಿ ಕಾವ್ಯ

ಕರೆದಾಗ ಬರಳು
ಬರೆವಾಗ ಬರುತಾಳೆ ಸ್ಮೃತಿಗೆ
ಹಿಂದಿರುಗಲು 
ಒಂದೇ ಕಾಲಿನಲಿ
ನಿಂತು ಬಿಡುತಾಳೆ
ಶರಕ್ಷರಗಳ ಗುರಿಯಿಟ್ಟು ಎದೆಗೆ 
ಬರವಣಿಗೆ ಬದಿಗೆ 
 
ಬರೆದೊಡೆದ ಸಾಲಲ್ಲಿ 
ಪೋಲಿತನವ ಮರೆಸಿ 
ನಾನಲ್ಲದ ಸಭ್ಯ 
ಸಾಲುಗಳು ಹೊರಗಂಡು 
ಓದುತಾಳೆ ದನಿಗೆ 
ದನಿಯ ಜೊತೆಗೂಡಿಸಿ 
ಊದುತಾಳೆ ಕೆನ್ನೆಗೆ 
ನಾಚಿಕೆ ಬೆರೆಸಿ 
 
ಮಡಿಸಿಟ್ಟ ಹಾಳೆಯಲಿ 
ಗರಿಗೆದರಿ ಇರುತಾಳೆ 
ತೆರೆದು ಓದುವ ನನ್ನ 
ಕಣ್ಣುಗಳ ಪಾಲಿಗೆ 
ಸಿಗುತಾಳೆ ಪದಗಳ 
ಹೋಲಿಕೆ, ಹೊಗಳಿಕೆಗೆ 
ಆದರೂ ಪೂರ್ಣಗೊಳ್ಳದ 
ಕಾವ್ಯವಾಗುತಾಳೆ 
 
ಅವಳಾಗಿಯೇ ತಿದ್ದಿ 
ಬಿಡುತಾಳೆ ಕೃಷಿಗೆ 
ತೊನೆದ ತೆನೆಗೆ ತನ್ನ 
ಬಳುಕಾಟ ಕಳಿಸಿ 
ಕಣದಲ್ಲಿ ತೂರುವ 
ಅಕ್ಷರ ದವಸಕ್ಕೆ 
ಪ್ರಸವವೇದನೆಯನ್ನು 
ಅನುಭವಿಸೆ ಕೊಡುತಾಳೆ 
 
ಅವಳೆಂದರೆ ಅವಳೇ 
ಬೆರಳ ಮಸಿಗೊಳಿಸಿ 
ಮನವ ಹದಗೊಳಿಸಿ 
ಹಾಳೆ ಅಚ್ಚಾದಾಕೆ  
ಅವಲಂಬಿಸಿದೆ ಅವಳ 
ಕೈಪಿಡಿಯ ಸಾಂಗತ್ಯ 
ಮುಂದುವರಿಕೆಯ ಭಾಗ 
ಇನ್ನು ಮುಂದಕ್ಕೆ ..... 
 
                 -- ರತ್ನಸುತ

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...