Wednesday, 26 February 2014

ಬ್ಯಾಡ್ ಚಾಕ್ಲೇಟ್ ಅಂಕಲ್ !!

ಫಾರಿನ್ ಅಂಕಲ್ ಬರ್ತಾರೆ 
ಬಣ್ಣ ಬಣ್ಣದ ಚಾಕ್ಲೇಟ್ ಹೊತ್ತು 
ಮುದ್ದು ಮಾತಲ್ಲಿ ಕರ್ದು 
ಮಡ್ಲಲ್ಲಿ ಕೂರುಸ್ಕೊಂಡು  
ಕೊಡ್ತಾರೆ ಕೈ ತುಂಬ ಚಾಕ್ಲೇಟು 
"ನನ್ನ ಮುದ್ದು ಗೊಂಬೆ 
ಥೇಟು ಚಂದ್ರನ ಮಗಳಂತೆ" ಅಂತ 
ಎದೆಗೆ ಅಪ್ಪಿ, ಗಿಂಡ್ತಾರೆ ಕೆನ್ನೆನ 
ಪ್ರೀತಿ ತೋರ್ತಾ ಎಲ್ಲರ್ಮುಂದೆ !!

ಫಾರಿನ್ ಅಂಕಲ್ ಬರ್ತಾರೆ
ನನ್ಗರ್ಥ ಆಗೋ ಹಂಗೆ ಮಾತಾಡ್ದೆ 
ಕೈ ಹಿಡಿತಾರೆ, ಜೋರಾಗಿ ಎಳಿತಾರೆ 
ಬೇರೆನೇ ದನಿಯಲ್ಲಿ ಮತ್ತೆ 
"ನನ್ನ ಮುದ್ದು ಗೊಂಬೆ
ಥೇಟು ಚಂದ್ರನ ಮಗಳಂತೆ" ಅಂತಾರೆ 
ಅಪ್ಕೋತಾರೆ, ಜೋರಾಗಿ ಕೆನ್ನೆ ಗಿಂಡಿ
ಮೈಯ್ಯೆಲ್ಲಾ ಒತ್ತಾರೆ 
ಬಾಯ್ಮುಚ್ತಾರೆ ಬಿಗಿಯಾಗಿ 
ನಾ ಚೀರಾಡ್ದಂಗೆ !!

ನಾ ಜೋರಾಗೇ ಚೀರ್ತಿದ್ದೆ !!
ಯಾರ್ಗೂ ಕೆಳಿಸ್ದಂಗೆ 
ತುಂಬಾನೇ ನೋವಾಗ್ತಿತ್ತು;
ತಪ್ಪು ಮಾಡ್ದಾಗ ಮಿಸ್ಸು 
ಏಟು ಕೊಟ್ಟಾಗಿದ್ಕೂ ಜಾಸ್ತಿ ನೋವು. 
ಬಟ್ಟೆ ಎಲ್ಲ ಹರ್ದೋಗ್ತಿತ್ತು 
ನನ್ ಫೇವರೆಟ್ ಕೆಂಪು ಫ್ರಾಕು 
ಹಾಳಾಗಿದ್ದು ಹಿಂಗೇನೆ 

ಏನಂತಾರೆ ಇದನ್ನ?
ಯಾರ್ಗ್ ಹೇಳ್ಳಿ ಇದ್ನೆಲ್ಲ?
ಅಪ್ಪ, ಅಮ್ಮ ಬೈದ್ರೆ?!!
"ಹೊಸ ಫ್ರಾಕ್ ಯಾಕ್ ಹರ್ಕೊಂಡೆ?" ಅಂತ
ಅಂಕಲ್ ಬೇರೆ ಹೆದ್ರಿಸಿದ್ರು 
ಯಾರ್ಗೂ ಹೇಳ್ಬಾರ್ದಂತ 
ಯಾಕ್ ಹೇಳ್ಬಾರ್ದು?
ಅಂಕಲ್ ಯಾಕ್ ಹಿಂಗ್ ಮಾಡ್ತಾರೆ?

ಈವತ್ತೂ ಬಂದಿದಾರೆ 
ನಂಗೆ ಹೊರ್ಗೆ ಆಟಾಡೋಕೆ ಹೋಗ್ಬೇಕು 
ನಾಳೆ ಬರ್ಬಾರ್ದಿತ್ತ ಈ ಅಂಕಲ್ಲು?!
ನಾಳೆ ಅನ್ನೋದು ಬರೋದೇ ಬೇಡಪ್ಪ ದೇವ್ರೆ!!

"ಈವತ್ತೆಲ್ಲ ಆಟಾಡ್ಕೊಂಡೇ ಇದ್ಬಿಡ್ತೀನಿ 
ಚಾಕ್ಲೇಟ್ ಮೇಲೆ ನಂಗೆ ಇಷ್ಟ ಇಲ್ಲ 
ಬೇಡ ನನ್ನ ಬಿಟ್ಬಿಡಿ" ಅಂದಾಗೆಲ್ಲ 
ಮತ್ತೆ ಕೂಡ್ಹಾಕ್ತಾರೆ ಮನೇಲಿ 
ಎಲ್ಲಾರೂ ಇದ್ದಾಗ ಅಂಕಲ್ ಒಳ್ಳೇವ್ರೇ 
ನಗ್ನಗ್ತಾ ಮಾತಾಡ್ತಾರೆ ಇಷ್ಟ ಆಗೋ ಹಂಗೆ;
ನಾನು ಒಬ್ಳೇ ಇದ್ದಾಗ ಯಾಕೆ
ಹೇಗ್ಹೇಗೋ ಆಡೋದು?!!

ಚಾಕ್ಲೇಟ್ ಕೊಟ್ರು 
ಬೇಡ ನಂಗೆ ಅಂದೆ, ಸುಮ್ನಾದ್ರು 
ಈಗ ನೋವ್ ಕೊಡ್ತಾರೆ  
ಬೇಡ ಅಂದ್ರೂ ಬಿಡಲ್ಲ 

ಅಮ್ಮ..... ಅಮ್ಮ......
ಸದ್ದು ಹೊರ್ಗೆ ಬರ್ಲೇ ಇಲ್ಲ.... 

ಹಿಂದಿ ಚಿತ್ರ "ಹೈವೇ (Highway)"ಯ ಕಾಡಿದ ಒಂದು ಸನ್ನಿವೇಶ ಹುಟ್ಟಿಸಿದ ಒಂದು ಪದ್ಯ ಇದು. ಯಾವ ಹೆಣ್ಣು ಮಗಳಿಗೂ ಈ ಕಷ್ಟ ಸಂಭವಿಸುವುದು ಬೇಡ ಎಂಬ ಅಭಿಲಾಷೆಯೊಂದಿಗೆ ಬರೆದುಕೊಂಡದ್ದು. 

                         
                                                                                     -- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...