Tuesday, 11 February 2014

ನಂಬಿದರೆ ನಂಬಿ, ಬಿಟ್ಟರೆ ಬಿಡಿ !!

ಭೂಮಿ ಭಾರವ 
ಎದೆ ತೂಕಕ್ಕೆ ಹೊಂದಿಸಿ 
ತೂಗುವ ವೇಳೆ 
ಎದೆಯೇ ಭಾರವಾಗಿತ್ತು 
 
ನನ್ನೊಳಗೆ ಹುದುಗಿಟ್ಟ 
ಜೀರಂಗಿ ಮೊಟ್ಟೆಗಳು 
ಮರಿ ಹಾಕಿವೆ;
ಗುಯ್ಗುಟ್ಟುತ ಮತ್ತೆ ಮೊಟ್ಟೆ ಇಟ್ಟು 
 
ಪ್ರತಿ ಕನಸಿನ ಗೂಡು 
ಒಂದೊಂದರ ಸೂರು 
ಬಹಳಷ್ಟು ಬೀದಿಗೆ ಬಿದ್ದವುಗಳು 
ಒಂದಷ್ಟು ಸ್ಥಾನ ಕದ್ದವುಗಳು 
 
ಸಾಲದಾದ ಕನಸುಗಳು
ಚಾಲನೆ ನೀಡಿವೆ
ಹೊಸ ಕಾಮಗಾರಿಗೆ 
ಇದೇ ಮೊದಲ ಬಾರಿಗೆ 
 
ದುರಸ್ತಿಗೆ ಸಜ್ಜಾಗಿವೆ 
ಹಳೆಯ ಜೋಪಡಿಗಳ ಕೆಡವಿ 
ಮುಗಿಲೆತ್ತರ ಕಟ್ಟಡಗಳ 
ಕಟ್ಟಿ ಬಿಡುವ ಸಲುವೆ 
 
ಅಮೃತ ಕೊಳ ಒತ್ತುವರಿಸಿ 
ಸುತ್ತುವರಿದ ಬೇಲಿ ತಂತಿ 
ಮುದಗೊಳ್ಳುವ ಮಸಿಗೆ 
ಬಿಕ್ಕಳಿಕೆ ಬಂದರೇನು ಗತಿ?!!
 
ಅಡಿಪಾಯವ ಅಡಿಗಡಿಗೂ ಕೆದಕಿ 
ಕೃತಕ ಕನಸಿನ ಕಾಂಕ್ರೀಟು ಸುರಿದು 
ಇದ್ದ ಕನಸುಗಳ ಬುಡ ಸಮೇತ ಕಿತ್ತ 
ಜೆ.ಸಿ.ಬಿಗಳು ಹಲ್ಲು ಗಿಂಜುತ್ತಿವೆ 

ಎಲ್ಲವೂ ವಿನೂತನವಾದ 
ಹೊಸತು ಭೂಮಿಯೊಂದು ಎದೆಯೊಳಗೆ;
ಕಾಣುವ ಕಣ್ಣುಗಳಿಗಷ್ಟೇ ಪ್ರೀತಿ 
ಅಂತರಾಳಕ್ಕೆ ನೋವಿನ ನರದ ಮೇಲೆ 
ಇನ್ನಷ್ಟು ಒತ್ತು 

ಈಗ ಎದೆ ಭಾರ 
ಭೂಮಿಗೂ ಹೆಚ್ಚು 
ನಂಬಿದರೆ ನಂಬಿ 
ಬಿಟ್ಟರೆ ಬಿಡಿ .... 

                             -- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...